ನವದೆಹಲಿ: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಕರ್ನಾಟಕದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದ್ದರೂ, ಅದ್ಯಾವುದನ್ನೂ ಲೆಕ್ಕಿಸದೆ ಕೇಂದ್ರ ಸರ್ಕಾರ ಸಮಿತಿ ರಚನೆ ಮಾಡಿ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿದೆ. ಆದರೆ ಈ ಸಮಿತಿಯಲ್ಲಿ ಕರ್ನಾಟಕದಿಂದ ಯಾವ ಸದಸ್ಯರೂ ಇಲ್ಲದಿರುವುದು ದುರಾದೃಷ್ಟ ಸಂಗತಿ.
ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಕುರಿತು ಶುಕ್ರವಾರ ಕೇಂದ್ರ ಜಲಸಂಪನ್ಮೂಲ ಇಲಾಖೆ ಆದೇಶ ಹೊರಡಿಸಿದ್ದು, ಕೇಂದ್ರ ಜಲ ಆಯೋಗದ ಮುಖ್ಯ ಇಂಜಿನಿಯರ್ ನವೀನ್ ಕುಮಾರ್ ಅವರನ್ನು ಸಮಿತಿಯ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಕೇರಳ, ತಮಿಳುನಾಡು, ಪುದುಚೆರಿಯ ನೀರಾವರಿ ಮುಖ್ಯ ಎಂಜಿನಿಯರ್‌ಗಳು, ಹವಾಮಾನ ಇಲಾಖೆಯ ವಿಜ್ಞಾನಿ ಡಾ.ಎ.ಮಹಾಪಾತ್ರ, ಕೇಂದ್ರೀಯ ಜಲ ಆಯೋಗದ ಕೊಯಮತ್ತೂರು ಸಿ.ಅಂಡ್ ಎಸ್.ಆರ್.ಓ. ಮುಖ್ಯ ಎಂಜಿನಿಯರ್ ಎನ್.ಎಂ.ಕೃಷ್ಣನುಣ್ಣಿ, ಕೇಂದ್ರ ಸರ್ಕಾರದ ತೋಟಗಾರಿಕೆ ಆಯುಕ್ತರು ಹಾಗೂ ಕೇಂದ್ರೀಯ ಜಲ ಆಯೋಗದ ಮುಖ್ಯ ಎಂಜಿನಿಯರ್ (ವೈಬಿಓ) ಎ.ಎಸ್.ಗೋಯಲ್ ನಿಯಂತ್ರಣ ಸಮಿತಿಯ ಸದಸ್ಯರಾಗಿದ್ದಾರೆ. ಆದರೆ ಕರ್ನಾಟಕದಿಂದ ಯಾರೂ ಈ ಸಮಿತಿಗೆ ಸದಸ್ಯರಾಗಿ ನೇಮಕವಾಗಿಲ್ಲ. ಇದಕ್ಕೆ ರಾಜ್ಯ ಸರ್ಕಾರ ತನ್ನ ಪ್ರತಿನಿಧಿಯ ಹೆಸರನ್ನು ಈವರೆಗೆ ಕಳುಹಿಸಿಲ್ಲ ಎಂಬ ಷರಾದೊಂದಿಗೆ ಎಂಟು ಮಂದಿ ಸದಸ್ಯರನ್ನು ಕೇಂದ್ರ ನೇಮಿಸಿದೆ.