ಕಾರವಾರ: ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿ, ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಜಿಲ್ಲಾ ಪತ್ರಿಕಾ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಸಂಪನ್ನವಾಯಿತು.

ಕಾರ್ಯಕ್ರಮದಲ್ಲಿ ಟಿವಿ 5 ಕನ್ನಡದ ಸಹ ಸಂಪಾದಕ ಶ್ರೀನಾಥ ಜೋಶಿ ಅವರಿಗೆ ಟ್ಯಾಗೋರ್ ಪತ್ರಿಕಾ ಪ್ರಶಸ್ತಿ, ಕನ್ನಡ ಪ್ರಭದ ವಿಶೇಷ ವರದಿಗಾರ ವಸಂತಕುಮಾರ್ ಕತಗಾಲ ಹಾಗೂ ಕೆಪಿಎನ್ ಛಾಯಾಗ್ರಾಹಕ ಪಾಂಡುರಂಗ ಹರಿಕಂತ್ರ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ಮತ್ತು ಬಿಟಿವಿ ನ್ಯೂಸ್‌ನ ಪ್ರಧಾನ ನಿರೂಪಕ ಶೇಷಕೃಷ್ಣ ಅವರಿಗೆ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ‌ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಪ್ರಭ ಪತ್ರಿಕೆಯ ಪ್ರಧಾನ ಸಂಪಾದಕ ರವಿ ಹೆಗಡೆ ಉತ್ತರ ಕನ್ನಡದಲ್ಲಿ ಯಾವುದೇ ಕಾರ್ಖಾನೆಗಳು ಇಲ್ಲದಿದ್ದರೂ ಪತ್ರಕರ್ತರ ಕಾರ್ಖಾನೆಗೆ ಮಾತ್ರ ಕೊರತೆ ಇಲ್ಲ. ದೊಡ್ಡಮಟ್ಟದ ಪತ್ರಕರ್ತರ ಸಂಖ್ಯೆ ಇಲ್ಲಿ ಬೆಳೆಯಲು ಇಲ್ಲಿನ ಪರಿಸರವೇ ಕಾರಣ ಎಂದು ಹೇಳಿದರು.

ಮುದ್ರಣ ಮಾಧ್ಯಮದ ಬಗ್ಗೆ ಅಷ್ಟೊಂದು ಅಸಮಧಾನ ಜನರಲ್ಲಿಲ್ಲ. ಆದರೆ, ದೃಶ್ಯ ಮಾಧ್ಯಮಗಳ ಧಾವಂತದಿಂದಾಗಿ ಪತ್ರಿಕೋದ್ಯಮಕ್ಕೆ ಗೃಹಣ ಹಿಡಿದಿದೆ. ಈ ಅರ್ಥವನ್ನು ಬದಲಿಸಲು ಅವಕಾಶವಿದೆ. ಪತ್ರಿಕೋದ್ಯಮಕ್ಕೆ 175 ವರ್ಷಗಳ ಇತಿಹಾಸವಿದೆ. ಆದರೆ, ದೃಶ್ಯ ಮಾಧ್ಯಮಕ್ಕೆ ಕೇವಲ 11 ವರ್ಷಗಳ ಇತಿಹಾಸವಷ್ಟೆ. ಹೀಗಾಗಿ ದೃಶ್ಯ ಮಾಧ್ಯಮಕ್ಕೆ ಪ್ರಬುದ್ಧತೆ ಇಲ್ಲವಾಗಿದೆ. ಆರೋಗ್ಯಯುತ ಚರ್ಚೆಗಳು ದೃಶ್ಯ ಮಾಧ್ಯಮಗಳಲ್ಲಿ ಆಗಬೇಕಿದೆ. ಟಿಆರ್‌ಪಿಯ ಪೈಪೋಟಿಯಲ್ಲಿ ರಾಷ್ಟ್ರದ ರಕ್ಷಣಾ ವ್ಯವಸ್ಥೆಯ ಕುರಿತ ಗುಟ್ಟುಗಳನ್ನೂ ಬಿಡುಗಡೆ ಮಾಡುತ್ತಿದ್ದೇವೆ. ಹೀಗಾಗಿ ಮಾಧ್ಯಮಗಳಿಗೆ ನಿಯಮಾವಳಿಗಳನ್ನು ಹಾಕಿಕೊಳ್ಳುವುದು ಅಗತ್ಯ. ಎಲ್ಲೆಲ್ಲಿ ನಿಯಂತ್ರಣ ಅಗತ್ಯ ಎನ್ನುವುದನ್ನು ಪತ್ರಕರ್ತರೇ ಚರ್ಚಿಸಬೇಕಿದೆ. ರಾಜಕಾರಣಿಗಳು ನಮಗೆ ಮೂಗುದಾರ ಹಾಕುವ ಬದಲು ನಾವೇ ನಮ್ಮ ಮೇಲೆ ನಿಯಂತ್ರಣ ಹೇರಿಕೊಳ್ಳುವುದು ಉತ್ತಮ. ಸುದ್ದಿಗಳು ಟಿಆರ್‌ಪಿಯಿಂದ ಹೊರಗಿರಬೇಕು ಎಂದು ಹೇಳಿದರು.

RELATED ARTICLES  ಕಾಗೇರಿಯ ಪರ ಪ್ರಚಾರಕ್ಕೆ ಬಂದ ರಾಕಿಂಗ್​​​ ಸ್ಟಾರ್​​ ಯಶ್​​! ಶಿರಸಿಯ ಜನತೆ ಫುಲ್ ಫಿದ್ದಾ..

ಸಾಮಾಜಿಕ ಜಾಲತಾಣವು ‘ಮಿಥ್ಯಾ ರಾಕ್ಷಸ’ನಂತೆ. ಇವುಗಳಿಂದಾಗಿ ಜನರಿಗೆ ಮಾಧ್ಯಮಗಳ ಮೇಲೆ ದಿನದಿಂದ ದಿನಕ್ಕೆ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ. ಪತ್ರಕರ್ತರು ಅದನ್ನು ಉಳಿಸಿಕೊಳ್ಳಬೇಕಾಗಿದೆ. ಆದರೆ, ತಂತ್ರಜ್ಞಾನದ ಬಳಕೆಯನ್ನು ನಿಲ್ಲಿಸಲು ಅಸಾಧ್ಯ. ಸಾಮಾಜಿಕ ಜಾಲತಾಣಗಳಿಂದಾಗಿ ಓದುಗರೇ ವರದಿಗಾರರಾಗಿ ಬದಲಾಗುತ್ತಿದ್ದಾರೆ. ಮೊಬೈಲ್ ಒಂದೇ ಸಾಕು. ‘ಮೊಬೈಲಿಸಮ್’ ಮೇಲೆ ಕೋಟ್ಯಂತರ ರೂಪಾಯಿ ವ್ಯಯಿಸಲಾಗುತ್ತಿದ್ದು, ಪತ್ರಕರ್ತರೂ ಈ ತಂತ್ರಜ್ಞಾನಕ್ಕೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂದರು.

ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲೆಯಲ್ಲಿ ವಿಪುಲ ಅವಕಾಶವಿದೆ. ಸರಿಯಾಗಿಯಾದರೆ ಐದು ವರ್ಷಗಳಲ್ಲಿ ಅದ್ಭುತ ಪ್ರವಾಸೋದ್ಯಮ ಅಭಿವೃದ್ಧಿ ಇಲ್ಲಿ ಆಗುತ್ತದೆ. ಜಿಲ್ಲಾಧಿಕಾರಿ ಸಹಕಾರದಲ್ಲಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಶಾಸಕಿ ರೂಪಾಲಿ ನಾಯ್ಕ ಅವರು ಕಾರ್ಯೋನ್ಮುಖರಾಗಲಿ ಎಂದು ಸಲಹೆ ನೀಡಿದರು.

RELATED ARTICLES  ಕುಮಟಾದಲ್ಲಿ ಅಗ್ನಿ ಅವಘಡ: ತಕ್ಷಣ ಸ್ಥಳಕ್ಕೆ ತೆರಳಿ ಸಾಂತ್ವಾನ ಹೇಳಿ, ಪರಿಹಾರ ನೀಡಿದ ರವಿಕುಮಾರ್ ಶೆಟ್ಟಿ

ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಪತ್ರಕರ್ತರು ಪ್ರತಿ ಅಕ್ಷರವನ್ನೂ ಬರೀತಾರೆ. ಒತ್ತಡದಿಂದ ಇದ್ದರೂ ನೇರವಾಗಿ ಬರೀತಾರೆ. ಜನರಿಗೆ ಮೋಸ ಆಗುವಂಥದ್ದನ್ನು ತಡೆಯುವ ಕೆಲಸ ಮಾಡುತ್ತಿದ್ದಾರೆ. ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜಗತ್ತಿನ ಮೂಲೆ ಮೂಲೆಯ ಸಮಸ್ಯೆಗಳು ಬಗೆಹರಿಯಲು ಮೂಲ ಕಾರಣವೇ ಪತ್ರಕರ್ತರು. ರಾಜಕಾರಣದಲ್ಲಿ ರಾಜಕೀಯ ಭಾರಿ ಇದೆ. ಆದರೆ, ಸರಸ್ವತಿಯನ್ನು ಒಲಿಸಿಕೊಂಡಿರುವವರು ಸುಳ್ಳನ್ನು ಬರೆಯಬೇಡಿ. ಕೆಟ್ಟದ್ದಿದ್ದರೆ ಕೆಟ್ಟದ್ದು, ಒಳ್ಳೆಯದಿದ್ದರೆ ಒಳ್ಳೆಯದನ್ನು ಬರೆಯಿರಿ. ಸತ್ಯಾನೇ ಗೆಲ್ಲುತ್ತದೆ. ಆತ್ಮವಿಶ್ವಾಸದಿಂದ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಪ್ರಜಾಪ್ರಭುತ್ವದ ಮೂರು ಅಂಗಗಳು ಎಲ್ಲಾದರು ಎಡವಿದಾಗ ನಾಲ್ಕನೇ ಅಂಗವಾದ ಮಾಧ್ಯಮ ಎಚ್ಚರಿಸುತ್ತದೆ. ಸ್ವಯಂ ನಿಯಂತ್ರಣ ಮಾಧ್ಯಮಗಳಿಗೆ ಅಗತ್ಯವಾಗಿದೆ. ದೃಶ್ಯ ಮಾಧ್ಯಮದಲ್ಲಿ ಜನಾಭಿಪ್ರಾಯ ಸೃಷ್ಟಿಸಲು ಅವಕಾಶ ಕೊಡುತ್ತಿಲ್ಲ ಎನ್ನುವ ಆರೋಪವಿದೆ. ನೈಜತೆ ಕಡಿಮೆ ಆಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಯನ್ನು ಪರಿಶೀಲನೆ ಮಾಡಿಕೊಳ್ಳುವುದು ಅಗತ್ಯ ಎಂದರು.

ಈ ವೇಳೆ ಜಿಲ್ಲಾ ಪತ್ರಿಕಾ ಭವನಕ್ಕೆ ಕೊಡುಗೆ ನೀಡಿದ ದಾನಿಗಳಾದ ರಾಜು ತಾಂಡೇಲ್, ಜಾರ್ಜ್ ಫರ್ನಾಂಡೀಸ್, ಮಾಧವ ನಾಯಕ, ದಿಲೀಪ ಅರ್ಗೇಕರ್, ಇಬ್ರಾಹಿಂ ಕಲ್ಲೂರ್, ನಿರಾಕಾರ ಫರ್ನೀಚರ್ಸ್, ಸುರೇಶರ್ ಶೆಟ್ಟಿ, ಗಿರೀಶ್ ರಾವ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.