ಬೆಂಗಳೂರು, -ಆರ್‌ಟಿಇ ಶಿಕ್ಷಣ ಮತ್ತು ಸರ್ಕಾರಿ ಶಾಲೆಗಳ ಬಗ್ಗೆ ಗಂಭೀರ ಚರ್ಚೆ ನಡೆದು ಶಾಸಕರು ಪಕ್ಷಭೇದ ಮರೆತು ಲೋಪದೋಷಗಳ ವಿರುದ್ಧ ಹರಿಹಾಯ್ದರು. ಜೆಡಿಎಸ್ ಶಾಸಕರಾದ ಎ.ಟಿ.ರಾಮಸ್ವಾಮಿ ಅವರು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡುತ್ತಾ, ಹಳ್ಳಿ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಸರ್ಕಾರಿ ಶಿಕ್ಷಕರಿಗೆ ಕೊಡುವ ಸಂಬಳವನ್ನು ಖಾಸಗಿ ಶಾಲೆಗಳು ಮೂರು ಜನ ಶಿಕ್ಷಕರಿಗೆ ನೀಡುತ್ತವೆ. ಆದರೆ ಫಲಿತಾಂಶದ ವಿಷಯದಲ್ಲಿ ಖಾಸಗಿ ಶಾಲೆಗಳೇ ಮುಂದಿವೆ. ನಮ್ಮ ಅಧಿಕಾರಿಗಳ ಮಕ್ಕಳ್ಯಾರೂ ಸರ್ಕಾರಿ ಶಾಲೆಯಲ್ಲಿ ಓದುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವ ಶಾಸಕರ ಮಕ್ಕಳೂ ಸರ್ಕಾರಿ ಶಾಲೆಯಲ್ಲಿ ಓದುತ್ತಿಲ್ಲ ಎಂದು ರಮೇಶ್‍ಕುಮಾರ್ ಧ್ವನಿಗೂಡಿಸಿದರು. ಇದಕ್ಕೆ ಉತ್ತರ ನೀಡಿದ ಮಾಜಿ ಶಿಕ್ಷಣ ಸಚಿವ ಹಾಗೂ ಶಾಸಕ ತನ್ವೀರ್‍ಸೇಠ್ ಅವರು, ಹಿಂದಿನ ಸರ್ಕಾರ ಶಿಕ್ಷಣ ಸುಧಾರಣೆಗೆ ಕೈಗೊಂಡ ಹಲವಾರು ಕ್ರಮಗಳ ಬಗ್ಗೆ ವಿವರಿಸಿದರು. ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಬಿಜೆಪಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಆರ್‍ಟಿಇ ಕಾಯ್ದೆಯಿಂದ ಎಷ್ಟು ಜನ ಬಡ ಮಕ್ಕಳಿಗೆ ಅನುಕೂಲವಾಗಿದೆ ಎಂಬುದನ್ನು ಬಹಿರಂಗಪಡಿಸಿ. ಹಿಂದಿನ ಸರ್ಕಾರ ಆರ್‍ಟಿಇ ಪ್ರವೇಶಕ್ಕೆ ಆದಾಯ ಮಿತಿಯನ್ನು 6 ಲಕ್ಷದವರೆಗೆ ಹೆಚ್ಚಿಸಿದೆ. ಖಾಸಗಿ ಶಾಲೆಗಳ ಶುಲ್ಕವನ್ನು 8 ರಿಂದ 16 ಸಾವಿರ ರೂ.ಗಳಿಗೆ ಹೆಚ್ಚಿಸಿದೆ. ಆದರೆ ಅಲ್ಲಿ ಬಡವರ ಮತ್ತು ಗ್ರಾಮೀಣ ಭಾಗದ ಮಕ್ಕಳಿಗೆ ಸೀಟು ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಆಕ್ಷೇಪಕ್ಕೂ ಉತ್ತರ ನೀಡಿದ ತನ್ವೀರ್‍ಸೇಠ್ ಅವರು, ಅಂಚೆಕಚೇರಿ ಪಿನ್‍ಕೋಡ್ ಆಧರಿಸಿ ಸೀಟು ಹಂಚಿಕೆ ಮಾಡಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು. ಮಧ್ಯಪ್ರವೇಶಿಸಿದ ಸ್ಪೀಕರ್ ರಮೇಶ್‍ಕುಮಾರ್, ಆರ್‍ಟಿಇ ಕಾಯ್ದೆಯಿಂದ ಬಡವರ ಮಕ್ಕಳಿಗೆ ಅನುಕೂಲವಾಗಿದೆಯೇ ಎಂಬ ಬಗ್ಗೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು. ಬಿಜೆಪಿ ಶಾಸಕರಾದ ಅರಗ ಜ್ಞಾನೇಂದ್ರ, ಹಳ್ಳಿಗಳ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಿ ಸರ್ಕಾರಿ ಶಾಲೆಗಳನ್ನು ಸುಧಾರಿಸಿ ಎಂದು ಸಲಹೆ ನೀಡಿದರು.
ಜೆಡಿಎಸ್ ಶಾಸಕ ಶಿವಲಿಂಗೇಗೌಡ ಮಾತನಾಡಿ, ಗ್ರಾಮೀಣ ಭಾಗದ ಪೋಷಕರಲ್ಲಿ ಇಂಗ್ಲೀಷ್ ವ್ಯಾಮೋಹ ಬಂದಿದೆ. ತಮ್ಮ ಮಕ್ಕಳು ಇಂಗ್ಲೀಷ್ ಕಲಿಯಬೇಕೆಂಬ ಕಾರಣಕ್ಕೆ ದುಡ್ಡು ಕೊಟ್ಟು ಖಾಸಗಿ ಕಾನ್ವೆಂಟ್‍ಗಳಿಗೆ ಕಳುಹಿಸುತ್ತಿದ್ದಾರೆ. ಮೂಲಸಮಸ್ಯೆ ಇರುವುದು ಸರ್ಕಾರಿ ಶಾಲೆಗಳ ಭಾಷಾ ವ್ಯವಸ್ಥೆಯಲ್ಲಿ. ನಮ್ಮಲ್ಲೂ ಇಂಗ್ಲೀಷ್ ಶಿಕ್ಷಣ ಕಲಿಸಿ, ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ. ಶಿಕ್ಷಕರ ಕೊರತೆ , ಸೌಲಭ್ಯಗಳ ಕೊರತೆ ನೆಪಮಾತ್ರ ಎಂದು ಹೇಳಿದರು.
ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಮಾತನಾಡಿ, ಸರ್ಕಾರಿ ಶಾಲೆ ಆವರಣದಲ್ಲೇ ಖಾಸಗಿ ಖರ್ಚಿನಲ್ಲಿ ಎಲ್‍ಕೆಜಿ, ಯುಕೆಜಿ ಶಿಕ್ಷಣವನ್ನು ಆರಂಭಿಸಲಾಯಿತು. ಅಲ್ಲಿ ಕಲಿತ ಮಕ್ಕಳ ಪೈಕಿ 24 ಮಂದಿ ಒಂದನೇ ತರಗತಿಗೆ ಸರ್ಕಾರಿ ಶಾಲೆಗೆ ದಾಖಲಾದರು. ಈ ಪ್ರಯೋಗ ಯಶಸ್ವಿಯಾಗಿದೆ, ಈ ಮಾದರಿಯನ್ನು ರಾಜ್ಯಾದ್ಯಂತ ಅನುಸರಿಸಿದರೆ ಸರ್ಕಾರಿ ಶಾಲೆಗಳು ಸುಧಾರಿಸುತ್ತವೆ ಎಂದರು. ಇಂಗ್ಲೀಷ್ ಭಾಷಾ ಶಿಕ್ಷಣದ ಬಗ್ಗೆ ಅರವಿಂದ ಬೆಲ್ಲದ್ ಒತ್ತಿ ಹೇಳುತ್ತಿದ್ದಾಗ. ಸ್ಪೀಕರ್ ರಮೇಶ್‍ಕುಮಾರ್ ಅವರು ನಾವೆಲ್ಲ ಕಾನ್ವೆಂಟ್‍ನಲ್ಲಿ ಕಲಿಯಲೇ ಇಲ್ಲ. ಕಾನ್ವೆಂಟ್ ಮತ್ತು ಭಾಷಾ ಮಾಧ್ಯಮ ಎಂಬುದು ಭ್ರಮೆಯಷ್ಟೇ ಎಂದರು.
ಬಿಜೆಪಿ ಶಾಸಕಿ ಪೂರ್ಣಿಮಾ ಮಾತನಾಡಿ, ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಭಾಷೆಯನ್ನೇ ಕಲಿಸುತ್ತಿಲ್ಲ. ನಾವ್ಯಾರು ಅದನ್ನು ಪ್ರಶ್ನಿಸುವ ಗೋಜಿಗೇ ಹೊಗುತ್ತಿಲ್ಲ ಎಂದರು.
ಅವರನ್ನು ಪ್ರಶ್ನೆ ಮಾಡಿದರೆ ಅಪಾಯ ಎದುರಿಸಬೇಕಾಗುತ್ತದೆ. ಅದಕ್ಕೆ ನಾನೇ ಉದಾಹರಣೆ ಎಂದು ರಮೇಶ್‍ಕುಮಾರ್ ಪ್ರತಿಕ್ರಿಯಿಸಿದರು. ಕಡೂರಿನ ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ಎಲ್ಲಾ ಪೋಷಕರಿಗೆ ಬಹುತೇಕ ಒಂದೊಂದೇ ಮಗುವಿರುತ್ತದೆ. ಮಕ್ಕಳು ಶಿಕ್ಷಣ ಪಡೆದ ನಂತರ ಶಾಲೆಗೆ ಸೇರಿಕೊಳ್ಳಲು ಹೊಸದಾಗಿ ಮಕ್ಕಳಿರುವುದಿಲ್ಲ. ಇದೂ ಕೂಡ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗಲು ಕಾರಣ ಎಂದರು.
ಸ್ಪೀಕರ್ ರಮೇಶ್‍ಕುಮಾರ್ ಅವರು ಕುಟುಂಬ ಕಲ್ಯಾಣ ಯೋಜನೆಯೂ ಜಾರಿಯಲ್ಲಿರಬೇಕು ಅಂತೀರಿ, ಮಕ್ಕಳ ಸಂಖ್ಯೆಯು ಜಾಸ್ತಿ ಇರಬೇಕು ಅಂತೀರಿ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಮತ್ತೊಬ್ಬ ಶಾಸಕರು, ಆರ್‍ಟಿಇ ಕಾಯ್ದೆಯೇ ಸರಿಯಿಲ್ಲ. ಮೊದಲು ಅದನ್ನು ರದ್ದು ಮಾಡಿ ಎಂದು ಒತ್ತಾಯಿಸಿದರು. ಆರ್‍ಟಿಇ ಶಿಕ್ಷಣದ ಬಗ್ಗೆ ವಿಧಾನಸಭೆಯಲ್ಲಿ ಗಂಭೀರವಾದ ಚರ್ಚೆಗಳು ನಡೆದವು.