ಚಿಕ್ಕಮಗಳೂರು: ಸಾಗರ, ಸಹ್ಯಾದ್ರಿ, ತೀರ್ಥಹಳ್ಳಿ ಆಯ್ತು, ಈಗ ಕೊಪ್ಪ ಕಾಲೇಜಲ್ಲು ಕೂಡ ಬುರ್ಕಾ ವಿವಾದ ತಲೆ ಎತ್ತಿದೆ.
ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಕಾ ಧರಿಸಿ ಕಾಲೇಜಿಗೆ ಬರುತ್ತಿರುವುದನ್ನು ಆಕ್ಷೇಪಿಸುತ್ತಿದ್ದ ಎಬಿವಿಪಿ ವಿದ್ಯಾರ್ಥಿಗಳು ಕೇಸರಿ ಶಲ್ಯ ಧರಿಸಿ ಬಂದು ವಿವಾದದ ಕಿಡಿ ಹೊತ್ತಿಸಿದ್ದಾರೆ. ಕೊಪ್ಪ ತಾಲೂಕಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.
ಕಳೆದ ವರ್ಷದವರೆಗೆ ಮುಸ್ಲಿಂ ವಿದ್ಯಾರ್ಥಿನಿಯರು ರೆಸ್ಟ್ ರೂಂನಲ್ಲಿ ಬುರ್ಕಾ ತೆಗೆದಿಟ್ಟು ತರಗತಿಗೆ ಬರುತ್ತಿದ್ದರು. ಆದರೆ ಈ ವರ್ಷದಿಂದ ಬುರ್ಕಾ ಧರಿಸಿಕೊಂಡೇ ತರಗತಿಗೆ ಬರುತ್ತಿದ್ದರು. ಇದು ಕಾಲೇಜಿನ ಶಿಷ್ಟಾಚಾರಕ್ಕೆ ವಿರುದ್ಧ, ಸಮವಸ್ತ್ರವಿರುವಾಗ ಬುರ್ಕಾ ಧರಿಸುವುದು ಎಷ್ಟು ಸರಿ ಎಂದು ಎಬಿವಿಪಿ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ತಗಾದೆ ತೆಗೆದಿದ್ದು, ಬುರ್ಕಾ ನಿಷೇಧಿಸುವಂತೆ ಜೂನ್ 30 ರಂದು ಪ್ರಾಂಶುಪಾಲರಿಗೆ ಮನವಿ ಮಾಡಿದ್ದರು. ಆದರೆ ಪ್ರಾಂಶುಪಾಲ ಅನಂತ್, ಬುರ್ಖಾ ಧರಿಸಬಾರದೆಂದು ನಮ್ಮಲ್ಲಿ ನಿಯಮಗಳಿಲ್ಲ ಎಂದಿದ್ದಾರೆ.
ಇದರಿಂದ ಆಕ್ರೋಶಗೊಂಡ ಎಬಿವಿಪಿ ವಿದ್ಯಾರ್ಥಿಗಳು ಹಾಗಾದರೆ ನಾವು ಕೇಸರಿ ಶಲ್ಯ ಧರಿಸಿಕೊಂಡು ಬರುವುದಾಗಿ ಪ್ರಾಂಶುಪಾಲರಿಗೆ ಸವಾಲು ಹಾಕಿದ್ದು, ಅದರಂತೆ ಕೇಸರಿ ಶಲ್ಯ ಧರಿಸಿ ಕಾಲೇಜಿಗೆ ಬಂದಿದ್ದಾರೆ.