✍ ಎಮ್ ಎಸ್ ಶೋಭಿತ್ ಮೂಡ್ಕಣಿ
ಪತ್ರಿಕೋದ್ಯಮ ಕುರಿತು ಉತ್ತಮ ಕೃತಿಗಳನ್ನು ಪ್ರಕಟಿಸಿ ಜನಮನ್ನಣೆ ಗಳಿಸಿದ್ದ ಮಿಥಿಲಾ ಪ್ರಕಾಶನ ಇದೀಗ ತನ್ನ ಬ್ಯಾನರ್ ನಲ್ಲಿ “ಗಣಪನ ಮದುವೆ” ಎಂಬ ಕಿರುಚಿತ್ರದೊಂದಿಗೆ ಮತ್ತೆ ಸುದ್ದಿಯಲ್ಲಿದೆ. ಹಾಸ್ಯ ಮತ್ತು ಸಂದೇಶವುಳ್ಳ ಗಣಪನ ಮದುವೆ ಕಿರುಚಿತ್ರ ಸೋಮವಾರ ಯೂಟ್ಯೂಬ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಂಡಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಳಿಸುತ್ತಿದೆ. ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ 2500 ಜನರನ್ನು ತಲುಪಿದ್ದು, ಇದೀಗ 45,000 ಜನರನ್ನು ತಲುಪಿದೆ. ಪತ್ರಕರ್ತ ವಿನಾಯಕ ಕೋಡ್ಸರ ಕಿರುಚಿತ್ರದ ರೂವಾರಿಯಾಗಿದ್ದಾರೆ.
ಗಣಪ ಎಂಬ ಹಳ್ಳಿ ಹುಡುಗನ ಮದುವೆಯ ಕಥೆಯುಳ್ಳ ಈ ಚಿತ್ರ ಇವತ್ತಿನ ಮಲೆನಾಡಿನ ಹುಡುಗರ ಸ್ಥಿತಿಯ ಪ್ರತಿಬಿಂಬವಾಗಿದೆ. ಹುಡುಗಿ ಸಿಗುವುದಿಲ್ಲ. ಸಿಕ್ಕರೂ ಅವರ ಬೇಡಿಕೆಗಳನ್ನು ಪೂರೈಸಲು ಸಾಧ್ಯವೇ ಇಲ್ಲ ಎಂಬ ಸತ್ಯ ಗಣಪನಿಗೆ ಹುಡುಗಿ ಹುಡುಕಲು ಶುರುಮಾಡಿದಾಗ ತಿಳಿಯುತ್ತದೆ. ಈ ಮದುವೆಯ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಬಂದ ಗಣಪ ಕೊನೆಗೆ ಯಾರನ್ನು ಮದುವೆಯಾಗುತ್ತಾನೆ ಎಂಬುದೇ ಕಥೆಯ ಟ್ವಿಸ್ಟ್.
ಕಿರುಚಿತ್ರ ಎಂದಾಕ್ಷಣ ಸಾಮಾನ್ಯವಾಗಿ ಕಲಿಯಲಿಕ್ಕೆಂದು ಮಾಡುತ್ತಾರೆ ಇಲ್ಲವಾದರೆ ಯಾವುದಾದರೂ ಸ್ಪರ್ಧೆಗಳಿಗೆಂದು ನಿರ್ಮಿಸುತ್ತಾರೆ. ಅದರಾಚೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡರೂ 2 ವಾರ ಓಡಬೇಕು. ಎಂಬ ಆಲೋಚನೆಯಲ್ಲಿ ತಾಂತ್ರಿಕವಾಗಿಯೂ ಸಿನಿಮಾಕ್ಕೆ ಸರಿಸಮನಾಗಿ ನಿರ್ಮಾಣಗೊಂಡ ಕಿರುಚಿತ್ರ ಗಣಪನ ಮದುವೆ. ಇಲ್ಲೊಂದು ಹಾಸ್ಯವಿದೆ. ವಿಡಂಬನೆ ಇದೆ. ವಾಸ್ತವವಿದೆ. ಸಂದೇಶವಿದೆ. ಎಲ್ಲದಕ್ಕಿಂತ ಮಿಗಿಲಾಗಿ ನಮ್ಮ ನಿಮ್ಮೆಲ್ಲರ ಬದುಕಿದೆ. ಹಾಗಾಗಿ ಈ ಚಿತ್ರ ಬಹುತೇಕರಿಗೆ ಇಷ್ಟವಾಗುತ್ತೆ ಅಂತಲೇ ಇಂಥದ್ದೊಂದು ವಿಷಯ ಕೈಗೆತ್ತಿಕೊಂಡಿದ್ದು. ಶೇ.70 ರಷ್ಟು ಜನಕ್ಕೆ ಚಿತ್ರ ಇಷ್ಟವಾದರೆ ಗೆದ್ದಂತೆ ಅಂದುಕೊಂಡಿದ್ದೆ. ಶೇ.90 ರಷ್ಟು ಜನರಿಗೆ ಚಿತ್ರ ಇಷ್ಟವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಬರುತ್ತಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿನಾಯಕ ಕೋಡ್ಸರ.
ಕಥೆ ಚಿತ್ರಕಥೆ ವಿನಾಯಕ ಕೋಡ್ಸರ ಅವರದ್ದು. ಮಿಥಿಲಾ ಪ್ರಕಾಶನ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣಗೊಂಡಿದ್ದು ರಂಜನಾ ಹೆಗಡೆ ಮತ್ತು ಅನಿಲ್ ಭಾರದ್ವಾಜ್ ಚಿತ್ರದ ನಿರ್ಮಾಪಕರು. ಪ್ರಶಾಂತ್ ದೇಸಾಯಿ, ನಿರೂಪಕಿ ನವಿತಾ ಜೈನ್, ವನಿತಾ ಜೈನ್, ಶ್ರೀಲಕ್ಷ್ಮೀ, ಅಜಿತ್ ಬೊಪ್ಪನಳ್ಳಿ, ಸುಚೀತಾ ಭಟ್, ಅಕ್ಷತಾ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ. ಸಂದೀಪ್ ಥಾಮಸ್ ಮತ್ತು ಬೆಬನ್ ಕ್ಯಾಮರಾ ಕೈಚಳಕವಿದೆ. ವಿಶಾಲ್ ರಾಜ್ ಎಡಿಟರ್, ಹರ್ಷ ಕೋಗೋಡು ಮತ್ತು ವಿಶ್ವಪ್ರೇಮಿ ವಿಜಯ್ ಮ್ಯೂಸಿಕ್ ಮಾಡಿದ್ದಾರೆ. ಚಿತ್ರಕಥೆ-ಸಂಭಾಷಣೆ ಶಿರಸಿ ಮೂಲದ ಅಜಿತ್ ಬೊಪ್ಪನಳ್ಳಿ, ಸುಷ್ಮಾ ಮೂಡಬಿದ್ರಿ ಅವರದ್ದು.
ಮಾಸ್ ಮತ್ತು ಕ್ಲಾಸ್ ನಡುವೆ ಒಂದು ಸಣ್ಣ ಅಂತರವಿದೆ. ಆ ಗ್ಯಾಪ್ ಫಿಲ್ ಮಾಡುವ ಸಬ್ಜೆಕ್ಟ್ ಗಣಪನ ಮದುವೆ. ಸಿನಿಮಾ ನೋಡಿದ್ರೆ ಅದು ಗೊತ್ತಾಗುತ್ತೆ ಮತ್ತು 22 ನಿಮಿಷದ ಸಿನಿಮಾ ನೋಡಿದ್ದೇ ಗೊತ್ತಾಗದಂತೆ ನೋಡಿಕೊಂಡು ಹೋಗುತ್ತದೆ. ಇಲ್ಲಿ ಬಡಪಾಯಿ ಬ್ಯಾಚುಲರ್ ಹುಡುಗರಿಂದ ಹೆಂಡತಿಯಿಂದ ನೊಂದ ಗಂಡನಿಗೂ ಖುಷಿ ನೀಡುವವರೆಗಿನ ದೃಶ್ಯಗಳಿವೆ. ಹೀಗಾಗಿ ಎಲ್ಲ ಜನಕ್ಕೂ ಸಿನಿಮಾ ಇಷ್ಟವಾಗಿದೆ. ಭವಿಷ್ಯದಲ್ಲಿ ಈ ರೀತಿ ಕ್ಲಾಸ್ ಮತ್ತು ಮಾಸ್ ಬ್ಲೆಂಡ್ ಮಾಡಿ ಹಾಕಿದ ಕಾಸ್ ವಾಪಸ್ ಕೊಡುವ ಪೂರ್ಣಪ್ರಮಾಣದ ಸಿನಿಮಾ ಮಾಡುವ ಯೋಚನೆಯಿದೆ ಎನ್ನುತ್ತಾರೆ ವಿನಾಯಕ ಕೋಡ್ಸರ.
ಪ್ರಮುಖ ಅಂಶಗಳು:-
•”ಯೂಟ್ಯೂಬ್ ನಲ್ಲಿ ಸಖತ್ತಾಗಿ ನಡಿತಿದೆ ‘ಮದುವೆ’ ಸಂಭ್ರಮ”
• ಮದುವೆ ಮಂಟಪವನ್ನೇರಿದ ಬ್ಯಾಚುಲರ್ ‘ಗಣಪ’.
• ಹೊಸ ಟ್ರೆಂಡ್ ಹುಟ್ಟು ಹಾಕಿದೆ ವಿನಾಯಕ ಕೋಡ್ಸರ ಕನಸಿನ ಕೂಸು.