ಬೆಂಗಳೂರು, – ರಾಜ್ಯದಲ್ಲಿ 815 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ 809 ಕಾರ್ಯದರ್ಶಿಗಳ ಹುದ್ದೆಗಳು ಸೇರಿನಂತೆ 1624 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಎರಡು ತಿಂಗಳಲ್ಲಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ವಿಧಾನ ಪರಿಷತ್‍ಗೆ ತಿಳಿಸಿದರು.

ಪರಿಷತ್ ಕಲಾಪದಲ್ಲಿ ನಿಯಮ 72ರಡಿ ಬಿಜೆಪಿ ಸದಸ್ಯ ಎಂ.ಕೆ.ಪ್ರಾಣೇಶ್ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ನೇರ ನೇಮಕಾತಿ ಮೂಲಕ 1624 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಇನ್ನೆರಡು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. 6022 ಗ್ರಾಮ ಪಂಚಾಯಿತಿಗಳಿಗೆ ಕಂಪ್ಯೂಟರ್ ಡಾಟಾ ಎಂಟ್ರಿ ಆಪರೇಟರ್‍ಗಳನ್ನು ನೇಮಿಸಿಕೊಳ್ಳುವ ಪ್ರಸ್ತಾವನೆಯಿದ್ದು, ಪ್ರಸ್ತುತ 6ನೆ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನದಿಂದ ವೇತನ ಹೆಚ್ಚಳದ ಹೊರೆಯನ್ನು ಭರಿಸಬೇಕಾಗಿರುವುದರಿಂದ ಪ್ರಸ್ತಾವನೆ ಮುಂದೂಡುವಂತೆ ಆರ್ಥಿಕ ಇಲಾಖೆ ಮನವಿ ಮಾಡಿರುವುದರಿಂದ ವೇತನ ಹೆಚ್ಚಳ ಅನುಷ್ಠಾನದ ನಂತರ ಡಿಟಿಪಿ ಆಪರೇಟರ್‍ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

RELATED ARTICLES  ಕೆನರಾ ಸಂಸದ ಅನಂತ ಕುಮಾರ್ ಹೆಗಡೆ ಮೋದಿ ಸಂಪುಟ ಸೇರಿದ ಕ್ಷಣಗಳು.

ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ 2579 ಗ್ರಾಪಂಗಳಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳನ್ನು ಸೃಜಿಸಲಾಗಿದೆ. ಇನ್ನುಳಿದ 3443 ಗ್ರಾಪಂಗಳಿಗೆ ಹುದ್ದೆಗಳನ್ನು ಸೃಜಿಸಲು ಉದ್ದೇಶಿಸಿ ಆರ್ಥಿಕ ಇಲಾಖೆ ಅನುಮೋದನೆ ಕೋರಲಾಗಿದೆ ಎಂದರು. ಆರ್ಥಿಕ ಇಲಾಖೆ ಅನುಮೋದನೆ ಪಡೆದು ಹೆಚ್ಚುವರಿ ಸಹಾಯಕ ನಿರ್ದೇಶಕರ ಹುದ್ದೆಗಳು ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ಸೃಜಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಶಾಸಕರ ಅನುದಾನ ಯೋಜನಾ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಗ್ರಾಪಂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಇದನ್ನು ಖರ್ಚು ಮಾಡುವ ಬಗ್ಗೆ ಯೋಜನಾ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವ ಬಗ್ಗೆ ಸಚಿವರು ಭರವಸೆ ನೀಡಿದರು. ಬಾಪೂಜಿ ಕೇಂದ್ರಗಳಲ್ಲಿ ಎಲ್ಲ ಸೌಲಭ್ಯಗಳು ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

RELATED ARTICLES  ತಿಳಿದವರೇ ಹೀಗೆ ಮಾಡಿದರೆ ಹೇಗೆ ಎನ್ನುವ ಪ್ರಶ್ನೆ ಗೋಕರ್ಣ ಜನರದ್ದು