ಶಿರಸಿ: ನಗರಸಭೆಯಲ್ಲಿ ಬಿಜೆಪಿಯ 11 ಸದಸ್ಯರಿದ್ದರೂ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಾಮರ್ಥ್ಯ ಒಬ್ಬರಲ್ಲೂ ಇಲ್ಲ. ಹಾಗಾಗಿ ಚುನಾವಣಾ ಹೊಸ್ತಿಲಿನಲ್ಲಿ ನಾಟಕೀಯ ಪ್ರತಿಭಟನೆ ಮಾಡುತ್ತಿದ್ದಾರೆಂದು ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ ಟೀಕಿಸಿದರು.

ನಗರಾಡಳಿತ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದ ಬಿಜೆಪಿಗರ ಹೇಳಿಕೆಗೆ ನಗರಸಭೆಯಲ್ಲಿ ಸುದ್ದಿಗೋಷ್ಟಿ ನಡೆಸಿ ತಿರುಗೇಟು ನೀಡಿದ ಅವರು, ನಳಗಳಿಗೆ ಮೀಟರ್‌ ಅಳವಡಿಸುವಂತೆ 2010ರಲ್ಲಿ ಬಿಜೆಪಿ ಸರ್ಕಾರವೇ ಆದೇಶಿಸಿತ್ತು. ಅದನ್ನು ಹಂತಹಂತವಾಗಿ ಅನುಷ್ಠಾನಕ್ಕೆ ತರುತ್ತಿರುವ ನಗರಸಭೆ ವಿರುದ್ಧ ಬಿಜೆಪಿಗರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ನಳಕ್ಕೆ ಮೀಟರ್‌ ಅಳವಡಿಸುವ ಕುರಿತು 2 ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಬಿಜೆಪಿ ಅಧಿಕಾರಾವಧಿಯಲ್ಲಿ ನಗರಸಭೆಯಿಂದ ಸಾರ್ವಜನಿಕರಿಗೆ ವಿತರಿಸಿದ್ದ ಸುಮಾರು 2 ಸಾವಿರದಷ್ಟು ನಳಗಳ ಮೀಟರ್‌ ಕಳಪೆ ಗುಣಮಟ್ಟದ್ದಾಗಿದ್ದು, ಈಗಾಗಲೇ ಸಂಪೂರ್ಣ ಹಾಳಾಗಿದೆ. ಗುಣಮಟ್ಟ ನೋಡದೆ ಮೀಟರ್‌ ಅಳವಡಿಸಲಾಗಿದೆ. ಈ ಬಗ್ಗೆ ಚಕಾರ ಎತ್ತುವ ಧೈರ್ಯ ಒಬ್ಬರೂ ಮಾಡುತ್ತಿಲ್ಲ ಎಂದರು. ನಗರಸಭೆ ಚುನಾವಣೆ ಆಗಮಿಸಿದ್ದು ಬಿಜೆಪಿಗರು ನಾಟಕೀಯ ಪ್ರತಿಭಟನೆ ಮಾಡುತ್ತಿದ್ದಾರೆ. ನಗರಸಭೆಯಲ್ಲಿ 11 ಸದಸ್ಯರಿದ್ದರೂ ಸಭೆಯಲ್ಲಿ ಚರ್ಚಿಸದೆ ಪ್ರತಿಭಟನೆ ಮಾಡುತ್ತಿದ್ದಾರೆ. ಸಾಮರ್ಥ್ಯ ಇಲ್ಲದ ಇಂತಹ ಅಭ್ಯರ್ಥಿ ಆಯ್ಕೆ ಮಾಡುವ ಬದಲು ಬಿಜೆಪಿ ಈ ಬಾರಿಯ ಚುನಾವಣೆಯಲ್ಲಾದರೂ ನಗರದ ಅಭಿವೃದ್ಧಿ ಕುರಿತು ಚಿಂತಿಸುವವರಿಗೆ ಟಿಕೆಟ್‌ ನೀಡಲಿ ಎಂದು ಹೇಳಿದರು.

RELATED ARTICLES  ಕೊಂಕಣದಲ್ಲಿ ಕಂಕಣ ಸೂರ್ಯಗ್ರಹಣ ವೀಕ್ಷಣೆ ಮಾಡಿ ಸಂಭ್ರಮಿಸಿದ ವಿದ್ಯಾರ್ಥಿಗಳು

ನಗರಸಭೆಯಿಂದಲೇ ಮೀಟರ್‌ ಅಳವಡಿಸಲು ಸುಮಾರು 80 ಲಕ್ಷ ರೂ. ಬೇಕು. ಇಷ್ಟು ಮೊತ್ತದ ಹಣ ಸಧ್ಯ ನಗರಸಭೆಯಲ್ಲಿ ಇಲ್ಲವಾಗಿದ್ದು, ಸಾರ್ವಜನಿಕರೇ ಮೀಟರ್‌ ಅಳವಡಿಸಿಕೊಳ್ಳಬೇಕಿದೆ. ಈ ಹಿಂದೆ ನಗರಸಭೆಯಿಂದ ನೀಡಿದ್ದ ಮೀಟರ್ಗೂ ಅದರ ದರವನ್ನು ಪ್ರತೀ ತಿಂಗಳ ನೀರಿನ ಕರದ ಜೊತೆ ಪಡೆಯಲಾಗುವುದು ಎಂದರು. ಫಾರ್ಮ ನಂಬರ್‌ 3 ಗೊಂದಲದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದ್ದು ವಾರದೊಳಗೆ ಬಗೆಹರಿಯುವ ವಿಶ್ವಾಸವಿದೆ ಎಂದ ಅವರು, ನಗರವನ್ನು ಸಿಟಿ ಸರ್ವೆಗೆ (ಯುಪಿಓ) ಒಳಪಡಿಸಲು ಪ್ರಸ್ತಾವ ನೀಡಿ ಅನುಮೋದನೆಯಾಗುವ ಹಂತದಲ್ಲಿದೆ. ಅದಾದರೆ ಎಲ್ಲ ಸಮಸ್ಯೆಗೆ ತೆರೆ ಬೀಳಲಿದೆ ಎಂದರು.

RELATED ARTICLES  ಚಿತ್ರಿಗಿಯಲ್ಲಿ ಕಳೆಗಟ್ಟಿದ ಗುರುವಾರದ ಸಂತೆ: ಈರುಳ್ಳಿ ಕಿಲೋಗೆ ರು.500 ಗೆ ಸವಾಲು

ದೇವಿಕೆರೆ ಪಿಚ್ಚಿಂಗ್‌ ಕುಸಿದಿದ್ದು ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಕುಸಿದ ಪಿಚ್ಚಿಂಗ್‌ ಲ್ಯಾಂಡ್‌ ಆರ್ಮಿಯವರೇ ಸ್ವಂತ ಖರ್ಚಿನಲ್ಲಿ ಕಟ್ಟಬೇಕು. ಹೂಳು ತೆಗೆದು ಸರಿಪಡಿಸಬೇಕು ಎಂದು ಸೂಚಿಸಲಾಗಿದೆ ಎಂದರು. ಈ ವೇಳೆ ಸದಸ್ಯರಾದ ಸುಧಾಕರ ಶೆಟ್ಟಿ, ವಿನಾಯಕ ಹೊಸಪಟ್ಟಣ, ಮೋಹಿನಿ ಬೈಲೂರು, ಯಶವಂತ ಮರಾಠೆ, ಪೌರಾಯುಕ್ತೆ ಅಶ್ವಿನಿ ಬಿ.ಎಂ. ಹಾಗೂ ಇತರರು ಇದ್ದರು.