ಕಾರವಾರ: ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಮೀದ್ ಶೇಖ್ ಕೆಲ ನಿರ್ಲಜ್ಜ ವ್ಯಕ್ತಿಗಳು ವಕ್ಫ್ ಆಸ್ತಿಯನ್ನು ಅತಿಕ್ರಮಿಸಿಕೊಂಡು ಅದರ ಆದಾಯವನ್ನು ಅನುಭವಿಸುತ್ತಿದ್ದಾರೆ. ಕೆಲ ಮಸೀದಿ ಹಾಗೂ ದರ್ಗಾಗಳ ಕಮೀಟಿಯು ಸಹ ಧಾರ್ಮಿಕ ನಿಧಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಕರ್ನಾಟಕ ಹೈಕೋರ್ಟ್‌ನ ಆದೇಶದ ನಂತರ ಜಿಲ್ಲಾಧಿಕಾರಿಗಳು ಇಲ್ಲಿನ ಕಡವಾಡದ ಹಜರತ್ ಬಾವಾ ಬದಂಗ್ ದರ್ಗಾದ ಆಡಳಿತವನ್ನು ಜಿಲ್ಲಾ ವಕ್ಫ್ ಅಧಿಕಾರಿ ತಾಜುದ್ದೀನ್‌ರಿಗೆ ವಹಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಅವರು ಕಳೆದ ಮೂರುದಿನಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದಾರೆ ಎಂದರು.
ಈ ಬದಲಾಗಿ ಜಿಲ್ಲಾಡಳಿತವು ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕೆಂದು ಈ ಬಗ್ಗೆ ಈಗಾಗಲೇ ರಾಜ್ಯ ಹೈಕೋರ್ಟ್‌ನಲ್ಲಿ ರಿಟ್ ಪಿಟಿಷನ್ ದಾಖಲಾಗಿಸಲಾಗಿದೆ ಎಂದು ಹಮೀದ್ ಶೇಖ್ ಹೇಳಿದರು. ಅದೇ ರೀತಿಯಾಗಿ ನಾಲ್ಕುಸಾವಿರ ವರ್ಷದ ಇತಿಹಾಸವಿರುವ ಸದಾಶಿವಗಡದ ಫೀರ್ ಷಾ ಶಂಶುದ್ದೀನ್ ಕಾರೊಬತ್ ದರ್ಗಾಕ್ಕೂ ಸಹ ಆಡಳಿತಾಧಿಕಾರಿ ನೇಮಕಕ್ಕೆ ಆಗ್ರಹಿಸಿ ಹೈಕೋರ್ಟ್‌ನಲ್ಲಿ ಇನ್ನೊಂದು ರಿಟ್ ಪಿಟಿಶನ್ ದಾಖಲಾಗಿಸಲಾಗಿದೆ ಎಂದರು.
ರಾಜ್ಯದಲ್ಲಿರುವ ವಕ್ಫ್ ಬೋರ್ಡ್‌ನ ಒಟ್ಟಾರೆ ಆಸ್ತಿಯ ಸರ್ವೇ ಹಾಗೂ ವಕ್ಫ್ ಆಸ್ತಿಯ ಅತಿಕ್ರಮಣ ತೆರವುಗೊಳಿಸಲು ಈ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳುವಂತೆ ನ್ಯಾಯವಾದಿ ಹಾಗೂ ಸಾಮಾಜಿಕ ಹೋರಾಟಗಾರ ಹಮೀದ್ ಶೇಖ್ ರಾಜ್ಯ ಸರ್ಕಾರವನ್ನು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಜಮಾತ ಧುರೀಣರಾದ ಮೈನುದ್ದೀನ್ ಶೇಖ್, ಅಸೀಪ್ ಖತೀಬ್ ಮತ್ತು ಅಫ್ತಾಬ್ ಖಾನ್ ಉಪಸ್ಥಿತರಿದ್ದರು.