ಕಾರವಾರ:ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕವು ಅಸಮರ್ಪಕವಾಗಿದ್ದು ಸಾಂಕ್ರಾಮಿಕ ಕಾಯಿಲೆ ಹರಡುವ ಕೇಂದ್ರವಾಗಿ ಪರಿಣಮಿಸಿದೆ ಎಂದು ಆರೋಪಿಸಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡದಲ್ಲಿರುವ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಕಾರವಾರ ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಕಳೆದ ಕೆಲವು ವರ್ಷಗಳಿಂದ ಶಿರವಾಡದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದಾಗಿ ಸ್ಥಳೀಯರಿಗೆ ತೀವೃ ಸಮಸ್ಯೆಯಾಗುತ್ತಿದ್ದು ವೈಜ್ಞಾನಿಕ ಮಾದರಿಯಲ್ಲಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದರೆಂದು ವರದಿಯಾಗಿದೆ.
೨೦೧೬ರಲ್ಲಿ ಕಾರವಾರ ತಾಲೂಕಿನಲ್ಲಿ ಒಟ್ಟೂ ೪೧ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಇವುಗಳಲ್ಲಿ ಅತೀ ಹೆಚ್ಚಿನ ಪ್ರಕರಣಗಳು ಶಿರವಾಡ ಗ್ರಾಮದಲ್ಲಿಯೇ ಪತ್ತೆಯಾಗಿದ್ದವು. ಇಲ್ಲಿನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿರುವುದೇ ಇದಕ್ಕೆ ಕಾರಣವಾಗಿತ್ತು. ಈ ಸಲವು ಮಾಲಿನ್ಯ ನೀರು ಸಂಗ್ರಹವಾಗಿದ್ದು ಹೆಚ್ಚಿನ ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟಿದೆ. ಅಲ್ಲದೆ ಇದುವರೆಗೂ ಫಾಗಿಂಗ್ ಕೂಡ ಮಾಡಲಾಗಿಲ್ಲ. ಹೀಗಾಗಿ ೨೦೧೬ರ ಭೀತಿ ಮತ್ತೆ ತಮಗೆ ಎದುರಾಗುವಂತಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತ ಪಡಿಸಿದ್ದಾರೆ.
ಕೆಲವು ದಿನಗಳಿಂದ ಈ ತ್ಯಾಜ್ಯ ವಿಲೇವಾರಿ ಘಟಕದ ಮಾಲಿನ್ಯ ನೀರು ಏಕಾಏಕಿ ಗ್ರಾಮಕ್ಕೆ ಹಾಗೂ ಕೈಗಾರಿಕಾ ವಸಹತು ಪ್ರದೇಶಕ್ಕೆ ನುಗ್ಗುತ್ತಿದ್ದು ಈ ಕುರಿತು ಕ್ರಮ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮವಾಗದ ಕಾರಣ ಆಕ್ರೋಶಗೊಂಡ ಸ್ಥಳೀಯರು ಸಾಕಷ್ಟು ಬಾರಿ ಒತ್ತಾಯಿಸಿದರೂ ಆಡಳಿತ ಕ್ರಮ ಕೈಗೊಳ್ಳದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಶಿರವಾಡದ ತ್ಯಾಜ್ಯ ವಿಲೆವಾರಿ ಘಟಕದ ಹೊಲಸು ನೀರು ಊರಿಗೆ ನುಗ್ಗುವದರಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಕುಡಿಯುವ ನೀರಿನ ಜೊತೆ ಇದು ಮಿಶ್ರಣವಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಪ್ರತಿ ಬಾರಿ ಪ್ರತಿಭಟಿಸಿದಾಗ ಮಾಲಿನ್ಯ ನೀರು ಊರಿಗೆ ನುಗ್ಗುವದನ್ನು ತಡೆಯಲಾಗುತ್ತದೆ. ಆದರೆ ರಾತ್ರಿ ವೇಳೆ ಮತ್ತೆ ನೀರನ್ನು ಹೊರಗೆ ಬಿಡಲಾಗುತ್ತದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಈ ಪ್ರಕ್ರಿಯೆ ಸಂಪೂರ್ಣವಾಗಿ ನಿಲ್ಲಬೇಕು. ಸ್ಥಳೀಯವಾಗಿ ಶುದ್ದಿಕರಣ ಘಟಕವಿಲ್ಲದ ಕಾರಣ ಈ ಸಮಸ್ಯೆ ಉಂಟಾಗಿದ್ದು, ಶುದ್ದಿಕರಣ ಘಟಕವನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.