ಬೆಂಗಳೂರು, – ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಸಂತೋಷದಿಂದ ಇಲ್ಲ. ನೋವನ್ನು ವಿಷಕಂಠನಾಗಿ ನುಂಗುತ್ತಿದ್ದೇನೆ ಎಂದು ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿ ಭಾವುಕರಾಗಿ ನುಡಿದರು. ನಗರದ ಜೆಪಿ ಭವನದಲ್ಲಿ ಜೆಡಿಎಸ್ ಪಕ್ಷ ಆಯೋಜಿಸಿದ್ದ ನೂತನ ವಿಧಾನಸಭಾ ಸದಸ್ಯರು , ವಿಧಾನ ಪರಿಷತ್ ಸದಸ್ಯರ ಸನ್ಮಾನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ವಿಷವನ್ನು ನಾನು ನುಂಗಿ ನಿಮಗೆ ಅಮೃತ ನೀಡಬೇಕಿದೆ ಎಂದು ಗದ್ಗದಿತರಾಗಿ ನುಡಿದರು. ನಾನು ಮುಖ್ಯಮಂತ್ರಿಯಾಗಿದ್ದು ನಿಮಗೆ ಸಂತೋಷ ತಂದಿರಬಹುದು. ಆದರೆ ಮುಖ್ಯಮಂತ್ರಿ ಸ್ಥಾನ ಸುಖದ ಸುಪ್ಪತ್ತಿಗೆ ಅಲ್ಲ. ಮುಳ್ಳಿನ ಹಾಸಿಗೆ. ಹೀಗಾಗಿ ಕುರ್ಚಿ ವ್ಯಾಮೋಹ ಇಲ್ಲ. ನಮ್ಮ ತಂದೆ-ತಾಯಿಗಳು ಮಾಡಿರುವ ದೇವರ ಪೂಜೆ ಹಾಗೂ ಆಶೀರ್ವಾದದಿಂದ ನಾಡಿನ ಆರೂವರೆ ಕೋಟಿ ಜನರ ಮುಖ್ಯಮಂತ್ರಿಯಾಗಿದ್ದೇನೆ. ನಾಡಿನ ಜನರು ನಮ್ಮ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಸ್ವೀಕರಿಸಿದಾಗ ಮಾತ್ರ ಅಭಿನಂದನೆಯನ್ನು ಸ್ವೀಕರಿಸುತ್ತೇನೆ . ಈಗ ಅಭಿನಂದನೆ ಸ್ವೀಕರಿಸುವುದಿಲ್ಲ ಎಂದು ಹೇಳಿದರು.
ಇಡೀ ರಾಷ್ಟ್ರದಲ್ಲೇ ಯಾರೂ ಮಾಡದ ಮಟ್ಟದಲ್ಲಿ ರೈತರ ಸಾಲ ಮನ್ನಾ ಮಾಡಿದ್ದರೂ ಜನರು ತಮ್ಮ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತಿಲ್ಲ ಎಂದು ಕಣ್ಣೀರು ಹಾಕಿದರು. ಕುರ್ಚಿಗಾಗಿ ಅಂಟಿಕೊಂಡು ಕೂರುವುದಿಲ್ಲ. ನಾಡಿನ ಜನರ ಸಮಸ್ಯೆ ಬಗೆಹರಿಸಲು ಕಾರ್ಯಕ್ರಮಗಳನ್ನು ರೂಪಿಸುವುದಾಗಿ ಹೇಳಿದರು.