ಕಾರವಾರ:ತಾಲೂಕಿನ ಸಮುದ್ರದ ತೀರದಲ್ಲಿ ನಿರ್ಮಿಸಿದ ಸುಂದರ ರಾಕ್‌ ಗಾರ್ಡನ್‌ ಸಮುದ್ರ ಕೊರೆತದಿಂದ ಕೊಚ್ಚಿ ಹೋಗುವ ಭೀತಿ ಎದುರಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಮುದ್ರ ತೀರದಲ್ಲಿ ಸುಮಾರು ಮೂರು ಕೋಟಿ ವಿನಿಯೋಗಿಸಿ ರಾಕ್‌ ಗಾರ್ಡನ್‌ ನಿರ್ಮಿಸಲಾಗಿತ್ತು. ಈ ಮಳೆಗಾಲದಲ್ಲಿ ಇಲ್ಲಿನ ಸಮುದ್ರದ ನೀರು ಉಕ್ಕಿ ರಾಕ್‌ ಗಾರ್ಡನ್‌ ವರೆಗೆ ಆಗಮಿಸಿದೆ. ಒಂದೊಮ್ಮೆ ಹೀಗೆ ಸಮುದ್ರ ನೀರು ಏರಿಳಿತವಾಗುತ್ತಾ ಮುಂದೊಂದು ದಿನ ಇಡೀ ರಾಕ್‌ ಗಾರ್ಡನ್‌ ಸಮುದ್ರ ಕೊರೆತಕ್ಕೆ ಕೊಚ್ಚಿ ಹೋಗು ಭೀತಿ ಎದುರಾಗಿದೆ.

ಸುಮಾರು ಎರಡು ಎಕರೆ ಸಮುದ್ರ ತೀರದಲ್ಲಿ ರಾಕ್‌ ಗಾರ್ಡನ್‌ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾದಾಗ ಸ್ಥಳೀಯ ಮೀನುಗಾರರು, ಬೀಚ್‌ ಪ್ರೇಮಿಗಳು ಮುಂದೊಂದು ದಿನ ಈ ಗಾರ್ಡನ್‌ ಸಮುದ್ರ ಕೊರೆತಕ್ಕೆ ಬಲಿಯಾಗಿ ಸರ್ಕಾರದ ಹಣ ನೀರಲ್ಲಿ ಕೊಚ್ಚಿ ಹೋಗುವುದು ಖಚಿತ ಎಂದಿದ್ದರಂತೆ. ಇದರಿಂದ ಸುಮ್ಮನೆ ಸಾರ್ವಜನಿಕರ ಹಣ ಪೋಲು ಎಂದು ಜಿಲ್ಲಾಡಳಿತವನ್ನು ಎಚ್ಚರಿಸಿದ್ದರು ಕೂಡಾ ಮುಂದುವರಿದು ಗಾರ್ಡನ್ ನಿರ್ಮಾಣ ಮಾಡಲಾಗಿತ್ತು.

RELATED ARTICLES  ಹಿರೇಗುತ್ತಿ ಮಹಾತ್ಮಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳ ಪಾಲಕರ ಸಭೆ

ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಈಗಾಗಲೇ ದೂರು ದಾಖಲಿಸಲಾಗಿದೆ. ಈಗ ಸಾರ್ವಜನಿಕರ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದಾಗಿ ಪರಿಸರ ಹೋರಾಟಗಾರ ಹಾಗೂ ನ್ಯಾಯವಾದಿ ಬಿ.ಎಸ್‌.ಪೈ ಎಚ್ಚರಿಸಿದ್ದಾರೆ. ಸ್ಥಳಕ್ಕೆ ಭೇಟಿದ ಮಾಜಿ ಶಾಸಕ ಸತೀಶ ಸೈಲ್‌ ಸಮುದ್ರ ತೀರದಲ್ಲಿ ರಾಕ್‌ ಗಾರ್ಡನ್‌ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾದಾಗ ಇದು ಸಮುದ್ರ ಕೊರೆತಕ್ಕೆ ತುತ್ತಾಗಬಹುದು ಎಂದು ಆಗಲೇ ಭವಿಷ್ಯ ನುಡಿದಿದ್ದೆ. ಆದರೆ ಜಿಲ್ಲಾಡಳಿತ ನನ್ನ ಸಲಹೆಗೆ ಕಿವಿಗೊಡದೆ ನಿರ್ಮಾಣ ಕಾರ್ಯ ಮುಂದುವರೆಸಿತು. ಈಗ ಅದು ನಿಜವಾಗಿದೆ ಎಂದು ಜಿಲ್ಲಾಡಳಿತದ ವಿರುದ್ಧ ಸೈಲ್‌ ತಮ್ಮ ಸಿಟ್ಟನ್ನು ಹೊರಹಾಕಿದರು.

RELATED ARTICLES  ಅಭೂತಪೂರ್ವ ಯಶಸ್ಸು ಕಂಡ "ಸಾಗುತಿರಲಿ ಬಾಳ ಬಂಡಿ" ಕಾರ್ಯಕ್ರಮ : ಸತ್ವಾಧಾರ ಫೌಂಡೇಶನ್ ಕಾರ್ಯದ ಬಗ್ಗೆ ಮೆಚ್ಚುಗೆ.

ರಾಕ್‌ ಗಾರ್ಡನ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಮಾರು ಐವತ್ತು ಕೀ.ಮೀಟರ್‌ ದೂರದ ಕುಮಟಾದಿಂದ ದೊಡ್ಡ ದೊಡ್ಡ ಬಂಡೆಗಲ್ಲುಗಳನ್ನು ತಂದು ಸಾರ್ವಜನಿಕರ ಹಣವನ್ನು ಬೇಕಾ ಬಿಟ್ಟಿಯಾಗಿ ಪೋಲು ಮಾಡಲಾಗಿದೆ ಎಂಬ ಆರೋಪವೂ ಈಗ ಕೇಳಿ ಬರುತ್ತಲಿದೆ.

ಅದೇನೇ ಇದ್ದರೂ ಸುಂದರ ತಾಣದ ಕನಸು ಕಂಡಿದ್ದ ಜನರಿಗೆ ಈಗ ಪ್ರಕೃತಿಯ ವೈಪರಿತ್ಯ ಹಾಗೂ ಕಡಲಿನ ಆರ್ಭಟ ನೋವು ತಂದಿರುವುದು ಮಾತ್ರ ಸುಳ್ಳಲ್ಲ.