ಕುಮಟಾ: ಬೈಪಾಸ್ ಯೋಜನೆಯನ್ನು ಕುಮಟಾದಲ್ಲಿ ಕೈಬಿಡುವಂತೆ ಬೈಪಾಸ್ ವಿರೋಧಿ ಹೋರಾಟಗಾರ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ನೇತೃತ್ವದ ನಿಯೋಗ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರ ಸ್ವಗೃಹದ ಜನತಾ ದರ್ಶನದಲ್ಲಿ ಇತ್ತೀಚೆಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಬೈಪಾಸ್ ನಿರ್ಮಿಸಲು ಕೆಲ ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ. ಕೆಲ ಉದ್ಯಮಿಗಳು ಅತಿಕ್ರಮಿಸಿಕೊಂಡ ಜಾಗದಲ್ಲಿರುವ ಉದ್ಯಮಗಳನ್ನು ರಕ್ಷಿಸಿಕೊಳ್ಳಲು ಕುಮಟಾದಲ್ಲಿ ಬೈಪಾಸ್ ನಿರ್ಮಿಸಲು ಲಾಬಿ ನಡೆಸಿದ್ದಾರೆ.
ಕುಮಟಾದಲ್ಲಿ ಕೆಲ ಜನರ ಸ್ವಾರ್ಥಕ್ಕೆ ಬಡಜನರು, ರೈತರು ನಿರಾಶ್ರಿತರಾಗುವ ಆತಂಕ ಎದುರಾಗಿದೆ. ಪಟ್ಟಣದಲ್ಲಿ ಹಾದುಹೋಗಿರುವ ಹೆದ್ದಾರಿಯನ್ನು ಬೈಪಾಸ್ ಆಗಿ ನಿರ್ಮಿಸುವಲ್ಲಿ ಕೆಲವು ಹಿತಾಶಕ್ತಿಗಳು ಪ್ರಯತ್ನವನ್ನು ನಡೆಸಿವೆ. ಇದ್ದಲ್ಲಿಯೇ ಹೆದ್ದಾರಿ ನಿರ್ಮಿಸಲು ಶ್ರೀಮಂತ 3-4 ಜನರ ವಿರೋಧವಿದ್ದು, ಬೇರೆ ಯಾರದೂ ವಿರೋಧವಿಲ್ಲ. ಬೈಪಾಸ್ ಹೆದ್ದಾರಿ ನಿರ್ಮಾಣವಾದರೆ ಕುಮಟಾ ಪಟ್ಟಣವು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ. ಬೈಪಾಸ್‍ದಿಂದ ಸಾವಿರಾರು ಬಡವರು ಮನೆಯನ್ನು ಕಳೆದುಕೊಂಡು ಬೀದಿಗೆ ಬರಲಿದ್ದಾರೆ. ಹೀಗಾಗಿ ಜನವಿರೋಧಿ ಬೈಪಾಸ್‍ನ್ನು ಕೈ ಬಿಡಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಕಾಮಗಾರಿಯನ್ನು ಪಡೆದಿರುವ ಐಆರ್‍ಬಿ ಕಂಪನಿಯವರೂ ಸಹಿತ ಕಾಮಗಾರಿಯನ್ನು ಮಂದಗತಿಯಲ್ಲಿ ನಡೆಸಿದ್ದಾರೆ. ಇದರಿಂದ ಈ ಭಾಗದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿ ಜೀವ ಹಾನಿಯಾಗಿದೆ. ಈ ಕಾಮಗಾರಿಗೂ ಚುರುಕು ನೀಡಿ, ಹೆದ್ದಾರಿಯು ಇದ್ದಲ್ಲಿಯೇ ಚತುಷ್ಪಥ ಹೆದ್ದಾರಿ ನಿರ್ಮಿಸಬೇಕು. ಈ ಬೈಪಾಸ್‍ಗೆ ಇಡೀ ಕುಮಟಾ ಜನತೆ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಈ ಯೋಜನೆಯನ್ನು ಕೈಬಿಟ್ಟು, ಈಗಿನ ಹೆದ್ದಾರಿಯಲ್ಲಿಯೇ ಚತುಷ್ಪಥ ಕಾಮಗಾರಿ ನಡೆಯಬೇಕೆಂದು ಮುಖ್ಯಮಂತ್ರಿಗಳಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಅವರು ಈ ಕುರಿತು ಪರಿಶೀಲಿಸಿ, ಕ್ರಮ ಕೈಗೊಳ್ಳಲು ಹೆದ್ದಾರಿ ಪ್ರಾಧಿಕಾರ ಮತ್ತು ಉತ್ತರ ಕನ್ನಡ ಜಿಲ್ಲಾಧಿಕಾರಿ ಅವರಿಗೆ ರವಾನಿಸುವ ಜೊತೆಗೆ ಈ ಕುರಿತು ಸೂಕ್ತ ಕ್ರಮಕ್ಕೆ ಆದೇಶಿಸಲಾಗುವುದು ಎಂದು ತಿಳಿಸಿದರು.