ಗೋವುಗಳಿಗೆ ಸಹಜ ಜೀವನ ಕಲ್ಪಿಸುವ ಪರಿಕಲ್ಪನೆಯಲ್ಲಿ, ವಿಶಿಷ್ಟ ಗೋಧಾಮ “ಗೋಸ್ವರ್ಗ”ವನ್ನು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಪರಿಕಲ್ಪಿಸಿ, ಉತ್ತರಕನ್ನಡದ ಭಾನ್ಕುಳಿಯಲ್ಲಿ ಸಾಕಾರಗೊಳಿಸಿದ್ದು, ” ಗೋಸ್ವರ್ಗ”ದ ಕುರಿತಾದ ಸಂವಾದ ಕಾರ್ಯಕ್ರಮ ವಿಜಯನಗರದ ಆರ್ ಪಿ ಸಿ ಬಡಾವಣೆಯಲ್ಲಿರುವ ಶ್ರೀಭಾರತೀ ವಿದ್ಯಾಲಯದಲ್ಲಿ ನಾಳೆ ಮಧ್ಯಾಹ್ನ 3.00 ಗಂಟೆಗೆ ನಡೆಯಲಿದೆ.
ವಿಶಿಷ್ಟ ಪರಿಕಲ್ಪನೆಯ ಗೋಸ್ವರ್ಗದ ಕುರಿತಾದ ವಿಚಾರ ವಿನಿಮಯ ಕಾರ್ಯಕ್ರಮ “ಗೋಸ್ವರ್ಗ ಸಂವಾದ – ಗೋಸಂಪದ ಸಮರ್ಪಣೆ” ಕಾರ್ಯಕ್ರಮ ನಡೆಯಲಿದ್ದು, ಗೋಸ್ವರ್ಗದ ಕುರಿತಾಗಿ ಪರಮಪೂಜ್ಯ ಶ್ರೀಗಳು ಮಾಹಿತಿ ನೀಡಲಿದ್ದು, ಆನಂತರ ಆ ಕುರಿತಾಗಿ ಪ್ರಶ್ನೋತ್ತರಗಳ ಸಂವಾದ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಶ್ರೀ ಮಧುಸೂಧನಾನಂದಪುರಿ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಲಿದ್ದು, ಶಾಸಕರಾದ ವಿ. ಸೋಮಣ್ಣ, ಶ್ರೀಮತಿ ಸೌಮ್ಯಾ ರೆಡ್ಡಿ, ಎಸ್ ರಘು, ಎಸ್ ಟಿ ಸೋಮಶೇಖರ್, ಖ್ಯಾತ ಉದ್ಯಮಿಗಳಾದ ಶ್ರೀ ಸುರೇಶ್ ಶೆಟ್ಟಿ ಗುರ್ಮೆ, ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಡಿ. ಚಂದ್ರಹಾಸ ರೈ ಹಾಗೂ ಬಿಬಿಎಂಪಿ ಮಾಜಿ ಮೇಯರ್ ಶ್ರೀಮತಿ ಜಿ ಪದ್ಮಾವತಿ ಸೇರಿದಂತೆ ಹಲವಾರು ಗಣ್ಯ ಮಾನ್ಯರು, ಗೋಪ್ರೇಮಿಗಳು ಸ್ವರ್ಗ ಸಂವಾದದಲ್ಲಿ ಭಾಗವಹಿಸಲಿದ್ದಾರೆ.
ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯ ಎಂಬ ಪರಿಕಲ್ಪನೆಯಲ್ಲಿ ಗೋಸ್ವರ್ಗವನ್ನು ನಿರ್ಮಿಸಲಾಗಿದ್ದು, ಇಲ್ಲಿ ಗೋವುಗಳಿಗೆ ಯಾವುದೇ ಬಂಧನವಿಲ್ಲದೇ ಇಚ್ಚೆಗನುಸಾರ ಸಂಚರಿಸುವ , ನೆರಳು – ಬಿಸಿಲಿನಲ್ಲಿ ವಿಹರಿಸುವ ವ್ಯವಸ್ಥೆ ಮಾಡಲಾಗಿದ್ದು, 24/7 ನೀರು ಹಾಗೂ ಆಹಾರ ಲಭ್ಯವಿರುವಂತೆ ಮಾಡಲಾಗಿದ್ದು, ತಾಯಿಯೊಂದಿಗೆ ಕರುವಿರಲು ಅವಕಾಶ ಸೇರಿದಂತೆ ಗೋವುಗಳಿಗೆ ಸಹಜ ಜೀವನದ ಅವಕಾಶವನ್ನು ಕಲ್ಪಿಸಲಾಗಿದೆ. ಅತ್ಯಾಧುನಿಕ ಗೋಸಂಶೋಧನಾ ಕೇಂದ್ರ, ಚಿಕಿತ್ಸಾಲಯ ಹಾಗೂ ಗವ್ಯೋತ್ಪನ ತಯಾರಿಕಾ ಘಟಕಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಶ್ರೀಭಾರತೀ ವಿದ್ಯಾಲಯದಲ್ಲಿ ನಡೆಯುವ ಸ್ವರ್ಗಸಂವಾದ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಲಿದ್ದು, ಗೋಸ್ವರ್ಗಕ್ಕೆ ಸೇವಾಕಾಣಿಕೆ ಸಲ್ಲಿಸಲು ಗೋಪ್ರೇಮಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸಮಸ್ತ ಗೋಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದ್ದು ಮಾಹಿತಿಗಾಗಿ 9449595206, 9448444446 ಸಂಪರ್ಕಿಸಬಹುದಾಗಿದೆ. ಸ್ಥಳ: ಶ್ರೀಭಾರತೀ ವಿದ್ಯಾಲಯ, ಸಿಎ 14, 11ನೇ ಅಡ್ಡರಸ್ತೆ, ಹಂಪಿನಗರ, ವಿಜಯನಗರ, ಬೆಂಗಳೂರು-40