ಶಿರಸಿ:ಗ್ರಾಹಕಸ್ನೇಹಿ ವ್ಯವಹಾರ ನಡೆಸುತ್ತಿರುವ ಉಮ್ಮಚಗಿಯ ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿಯ ಶಿರಸಿ ಶಾಖೆಯು ಉದ್ಘಾಟನೆಗೊಂಡಿದೆ. ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಶ್ರೀಗಳು ವ್ಯಾವಹಾರಿಕ ಲೆಕ್ಕಾಚಾರಗಳಿಗಿಂತ ಸೌಹಾರ್ದತೆಗೆ ಆದ್ಯತೆ ನೀಡಿದರೆ ಸೌಹಾರ್ದ ಸಹಕಾರಿ ಕ್ಷೇತ್ರಗಳು ವೇಗವಾಗಿ ಏಳ್ಗೆ ಸಾಧಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಕೊಡುಕೊಳ್ಳುವ ಮೂಲಕ ಅಭಿವೃದ್ಧಿ ಸಾಧ್ಯ ಎಂದು ಭಗವದ್ಗೀತೆಯಲ್ಲಿ ಭಗವಂತ ಉಲ್ಲೇಖಿಸಿದ್ದಾನೆ. ಅದರಂತೆ ಕೊಡುಕೊಳ್ಳುವ ವಿಷಯದಲ್ಲಿ ಆತ್ಮೀಯತೆ ಹಾಗೂ ಪರಿಶುದ್ಧತೆ ಇರಬೇಕು. ವ್ಯಾವಹಾರಿಕ ಪ್ರಪಂಚದಲ್ಲಿ ಸೌಹಾರ್ದತೆಗೆ ಎರಡನೇ ಸ್ಥಾನವಿದ್ದು ಪ್ರಥಮ ಸ್ಥಾನವನ್ನು ಲೆಕ್ಕಾಚಾರ ಆವರಿಸಿದೆ. ಈ ವ್ಯವಸ್ಥೆಗಿಂತ ಸೌಹಾರ್ದತೆ ಮೊದಲಾದರೆ ಸಂಸ್ಥೆ ಶೀಘ್ರ ಏಳ್ಗೆಯಾಗುತ್ತದೆ ಎಂದ ಶ್ರೀಗಳು ಉತ್ತರ ಕನ್ನಡದ ವಾಣಿಜ್ಯಿಕ ಕೇಂದ್ರ ಶಿರಸಿಯಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಭಾಗದ ಸಹಕಾರಿ ಸಂಸ್ಥೆಗಳು ಶಿರಸಿಯಲ್ಲಿವೆ ಎಂದ ಶ್ರೀಗಳು, ಸಂಘಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಕಷ್ಟದ ಕೆಲಸವಾಗಿದೆ. ಇಂತಹ ಸಂದರ್ಭದಲ್ಲಿಯೂ ಗ್ರಾಹಕಸ್ನೇಹಿ ಸೇವೆಗಳನ್ನು ಒಳಗೊಂಡ ಸಂಸ್ಥೆಯ ವಿಸ್ತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ನುಡಿದರು.
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಸಹಕಾರಿ ಕ್ಷೇತ್ರ ಜಿಲ್ಲೆಯಲ್ಲಿ ಉತ್ತಮವಾಗಿದ್ದು ರಾಜ್ಯಕ್ಕೆ ಮಾದರಿಯಾಗಿದೆ. ನಿಜವಾದ ಸಹಕಾರಿ ತತ್ವ ಇನ್ನೂ ಇಲ್ಲಿ ಜೀವಂತವಾಗಿದೆ ಎಂದರು. ಜಿಲ್ಲೆಯಲ್ಲಿ ಬೆಳೆಯುತ್ತಿರುವ ಸಹಕಾರಿ ರಂಗ ದೇಶವ್ಯಾಪಿ ವಿಸ್ತರಿಸಬೇಕು ಎಮನದ ಅವರು ಪ್ರಾಮಾಣಿಕತೆ, ಮಾನವೀಯತೆ ಹಾಗೂ ಪಾರದರ್ಶಕವಾಗಿ ಸಂಸ್ಥೆ ವ್ಯವಹರಿಸಿದರೆ ಇನ್ನಷ್ಟು ಏಳ್ಗೆ ಸಾಧ್ಯವಾಗುತ್ತದೆ ಎಂದರು.
ಟಿ.ಎಸ್.ಎಸ್. ಅಧ್ಯಕ್ಷ ಶಾಂತಾರಾಮ ಹೆಗಡೆ, ಸೌಹಾರ್ದ ಸಹಕಾರಿಯ ರಾಜ್ಯ ನಿರ್ದೇಶಕ ಶರಣ ಗೌಡ ಪಾಟೀಲ, ಸಹಕಾರಿ ಎನ್.ಪಿ.ಗಾಂವಕರ್, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭಾಸ್ಕರ ಹೆಗಡೆ, ನಿರ್ದೇಶಕ ಮೋಹನದಾಸ ನಾಯಕ, ಮಾರಿಕಾಂಬಾ ದೇವಾಲಯದ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಮುಖರಾದ ಸರಸ್ವತಿ ರವಿ, ಎಸ್.ಜಿ.ಹೆಗಡೆ, ವೇದಾವತಿ ಹೆಗಡೆ ಇದ್ದರು.