ರಾಷ್ಟ್ರದ ಲಾಂಛನ ಗೋವು ಆಗಬೇಕಾದರೆ, ದೇಶದ ಉತ್ಥಾನವಾಗಬೇಕಾದರೆ, ಗೋಹತ್ಯೆ ನಿಲ್ಲಬೇಕಿದೆ. ಎಲ್ಲಿ ಕಾಮಧೇನು ಸಂತಸವಾಗಿರುತ್ತಾಳೋ ಅದುವೇ ಸ್ವರ್ಗವಾಗಿದೆ. ಅಂತಹ ಸ್ವರ್ಗ ಸಾಕಾರದ ಸಲುವಾಗಿ ಗೋಸ್ವರ್ಗ ನಿರ್ಮಾಣವಾಗಿದೆ
ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳು ಹೇಳಿದರು.

ಬೆಂಗಳೂರಿನ ಭಾರತೀ ವಿದ್ಯಾಲಯದಲ್ಲಿ ನಡೆದ “ಸ್ವರ್ಗಸಂವಾದ – ಗೋಸಂಪದ ಸಮರ್ಪಣೆ” ಕಾರ್ಯಕ್ರಮವನ್ನುದ್ದೇಶಿಸಿ ಆಶೀರ್ವಚನವಿತ್ತ ಶ್ರೀಗಳು, ಗೋಸ್ವರ್ಗದ ಶ್ರೇಯವನ್ನು ಎಲ್ಲರಿಗೂ ಹಂಚುವ ಸಲುವಾಗಿ ಸ್ವರ್ಗಸಂವಾದ. ಗೋಸ್ವರ್ಗದ ಸ್ವಾಮ್ಯವನ್ನು ಗೋಭಕ್ತರ ಕೈಗಿಡಲು ಸ್ವರ್ಗಸಂವಾದ. ಗೋಸ್ವರ್ಗದ ಆಶಯದ ಕರು, ರಾಜ್ಯದೆಲ್ಲೆಡೆ ಕರು ಹಾಕಬೇಕೆನ್ನುವ ಬೃಹತ್ ಕಲ್ಪನೆಯ ಸಾಕಾರಕ್ಕಾಗಿ ಸ್ವರ್ಗ ಸಂವಾದ ಎಂದರು.

ಗೋಹಿಂಸೆ, ಗೋಹತ್ಯೆಗಳಷ್ಟೇ ಅಲ್ಲದೇ, ಗೋವು ಸಹಜವಾಗಿ ಜೀವನವನ್ನು ನಡೆಸಲು ಮನುಷ್ಯರು ಬಿಡುತ್ತಿಲ್ಲ. ಕರುವಿನ ಹಾಗೂ ತಾಯಿಯ ಅನನ್ಯ ಪ್ರೀತಿಗೆ ಅವಕಾಶವಿಲ್ಲದಂತೆ, ಬೇಕಾದ ಆಹಾರವನ್ನು, ಬೇಕಾದಷ್ಟು, ಬೇಕಾದಂತೆ ತಿನ್ನುವ ಸ್ವಾತಂತ್ರ್ಯವನ್ನು ಕೂಡಾ ಕಿತ್ತುಕೊಂಡಿರುವವರು ಇಂದಿನವರು. ಇಂತದ್ದೆಲ್ಲವನ್ನೂ ತೊಲಗಿಸಿ, ಗೋವಿನ ಸಮೃದ್ಧ ಜೀವನಕ್ಕೆ ಸಾಕ್ಷಿಯಾಗುತ್ತಿರುವುದು ಗೋಸ್ವರ್ಗ. ಗೋವುಗಳ ಪರಮ ಸ್ವಾತಂತ್ರ್ಯಕ್ಕೆ ಜ್ವಲಂತ ಸಾಕ್ಷಿ ಭಾನ್ಕುಳಿಯಲ್ಲಿ ಸನ್ನದ್ಧವಾಗಿರುವ ಗೋಸ್ವರ್ಗ ಎಂದರು.

RELATED ARTICLES  ತೆರಿಗೆ ಇಲಾಖೆ ತನಿಖಾ ದಳಕ್ಕೆ ದೂರು

ಗೋವಿಂದರಾಜನಗರದ ಶಾಸಕರಾದ ವಿ.ಸೋಮಣ್ಣ ಅವರು ಮಾತನಾಡಿ, ಭಗವಂತನನ್ನು ಕಾಣಲು ಅಸಾಧ್ಯವಾದರೂ, ಭಗವಂತನ ರೂಪವನ್ನು ರಾಘವೇಶ್ವರ ಶ್ರೀಗಳಲ್ಲಿ ಕಾಣಬಹುದಾಗಿದೆ. ಗೋಹತ್ಯೆ ಎನ್ನುವುದು ಮಾನವನ ಸ್ವಯಂಕೃತ ಅಪರಾಧ. ಇದರ ಬಗ್ಗೆ ಜಾಗೃತಿಯ ಸಲುವಾಗಿ ಗೋಸ್ವರ್ಗವೆನ್ನುವ ಸಂಭ್ರಮದ ನಿರ್ಮಾತೃವಾದ ಶ್ರೀಗಳಿಗೆ ಪೂರಕವಾಗಿ ಗೋಹತ್ಯೆ ನಿಷೇಧದ ಬಗ್ಗೆಯೂ ಸರ್ಕಾರ ಆಲೋಚಿಸಬೇಕಿದೆ. ಈ ಬಗೆಯ ಶ್ರೀಗಳ ಗೋಕಾರ್ಯ, ವಿಶ್ವದಲ್ಲೇ ಚಿರಸ್ಥಾಯಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಪಾದೇಕಲ್ಲು ವಿಷ್ಟುಭಟ್ ಅವರು ಮಾತನಾಡಿ, ದೇಸಿ ಗೋ ಸಂರಕ್ಷಣೆ, ಸಂವರ್ಧನೆಗೆ ಬೇಕಾಗಿ ವಿಶಿಷ್ಟವಾದ ಕಾರ್ಯನಿರ್ವಹಿಸುತ್ತಿರುವವರು ರಾಘವೇಶ್ವರ ಶ್ರೀಗಳು. ಹಲವೆಡೆ ಗೋಶಾಲೆಗಳ ನಿರ್ಮಾಣ ಮುಖೇನವಾಗಿ ಪ್ರಖ್ಯಾತರಾದ ಶ್ರೀಗಳು, ಗೋಶಾಲೆಗಳ ಮುಂದುವರೆದ ಭಾಗವಾದ ಗೋಸ್ವರ್ಗಕ್ಕೆ ಮುನ್ನುಡಿ ಬರೆದಿರುವುದು ಸಮಾಜಕ್ಕೆ ಮಾದರಿಯಾಗಬಹುದಾದ ವಿಚಾರ. ಗುರುಗಳ ಸಂಕಲ್ಪಶಕ್ತಿಗೆ ಸಮಾಜದ ಕರ್ತೃತ್ವಶಕ್ತಿ ಸೇರಿ, ಗೋಸ್ವರ್ಗದ ಸರ್ವ ಅಭಿವೃದ್ಧಿಗೆ ಗೋಭಕ್ತರು ಮನ ಮಾಡಬೇಕಿದೆ ಎಂದರು.

RELATED ARTICLES  ಉತ್ತಮ ಭವಿಷ್ಯಕ್ಕೆ ಇತಿಹಾಸದ ಅರಿವು ಅಗತ್ಯ : ವಿದ್ವಾನ್ ಜಗದೀಶ ಶರ್ಮಾ

ಗೋಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಜೋಗದ ಸಮೀಪದಲ್ಲಿ ನಿರ್ಮಾಣವಾಗಿರುವ “ಗೋಸ್ವರ್ಗ”ದ ಕುರಿತಾಗಿ ಮಾಹಿತಿ ಹಾಗೂ ಪ್ರಸ್ತುತಿಗಳ ವಿನಿಮಯ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾರುತಿ ಮೆಡಿಕಲ್ಸ್ ಮಾಲೀಕರಾದ ಮಹೇಂದ್ರ ಮುನ್ನೋಟ್, ಹಿರಿಯ ವಕೀಲರಾದ ರಾಘವನ್, ಪ್ರತಿಭಾ ಜ್ಯುವೆಲ್ಲರ್ಸ್ ಮಾಲಕರಾದ ಸಕಲಾ ನರಸಿಂಹಲು, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷರಾದ ಡಾ.ಗಿರಿಧರ್ ಕಜೆ , ಗೋವಿಜ್ಞಾನಿ ಡಾ. ಕೆ ಪಿ ರಮೇಶ್ ಸೇರಿದಂತೆ ಅನೇಕ ಗೋಪ್ರೇಮಿಗಳು ಗಣ್ಯರು ಉಪಸ್ಥಿತರಿದ್ದರು. ನೂರಾರು ಗೋಪ್ರೇಮಿಗಳು ಗೋಸಂಪದ ಸಮರ್ಪಿಸಿ ಪುಣ್ಯಭಾಗಿಗಳಾದರು.