ಶಿರಸಿ :ತಾಲೂಕಿನ ಮಿನಿ ವಿಧಾನಸೌಧದಲ್ಲಿ ಪ್ರಕೃತಿ ವಿಕೋಪದ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿ, ಸಿದ್ದಾಪುರದಲ್ಲಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಅತಿವೃಷ್ಟಿಯಾಗಿದೆ. ಆದ ಕಾರಣ ಸರ್ಕಾರ ಹೆಚ್ಚಿನ ಜವಾಬ್ದಾರಿ ವಹಿಸಿ, ಜಾನುವಾರು, ಮನೆಗಳಿಗೆ, ಮನುಷ್ಯರಿಗೆ ಹೆಚ್ಚಿನ ಹಾನಿ ಪರಿಹಾರವನ್ನು ಒದಗಿಸಿಕೊಡಬೇಕು ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಲೋಕೋಪಯೋಗಿ, ಹೆಸ್ಕಾಂ ಹಾಗೂ ಅರಣ್ಯ ಇಲಾಖೆಯವರು ಸೇರಿ ಬಿದಿರು ಕಟಿಂಗ್ ಮಾಡಬೇಕು. ಲೋಕೋಪಯೋಗಿ ಇಲಾಖೆಯವರು ನಿಲೇಕಣಿ ಬಳಿ ಹೊಂಡ ಮುಚ್ಚುವ ಕೆಲಸ ಮಾಡಬೇಕು ಹಾಗೂ ಕೆ.ಎಸ್.ಆರ್.ಟಿ.ಸಿ ಯವರು ಬನವಾಸಿ ಮತ್ತು ಹೊಸ ಬಸ್ ನಿಲ್ದಾಣದ ಬಳಿ ಆಗಿರುವ ಹೊಂಡವನ್ನು ಶೀಘ್ರದಲ್ಲೇ ಮುಚ್ಚಬೇಕು ಎಂದು ಆದೇಶಿಸಿದ ಅವರು , ಇಲಾಖೆಗಳು ಜನರ ಜೀವದ ಜೊತೆ ಆಟ ಆಡಬಾರದು. ಹೊರಗಿನಿಂದ ಬಂದವರಿಗೆ ಇಲ್ಲಿನ ರಸ್ತೆಗಳ ಬಗ್ಗೆ ಕಲ್ಪನೆ ಇರುವುದಿಲ್ಲ. ಅಪಘಾತಗಳು ಆಗದಂತೆ ನಾವು ನೋಡಿಕೊಳ್ಳಬೇಕು ಎಂದು ತಿಳಿಸಿದರು ಎಂದು ವರದಿಯಾಗಿದೆ.
ಅವರು, ಗ್ರಾಮೀಣ ಭಾಗದ ರಸ್ತೆ , ಸಿಡಿ , ಕಾಲಿಸಂಕ ನಿರ್ಮಾಣಕ್ಕೆ ಸರ್ಕಾರ ಇದುವರೆಗೆ ಯಾವುದೇ ರೀತಿಯ ಅನುದಾನ ಕೊಟ್ಟಿಲ್ಲ. ಕೇವಲ ೫೦ ಲಕ್ಷ ರೂ. ಹಣವನ್ನು ಮೀಸಲಿಡಲಾಗಿದೆ. ಆದರೆ ಮುಖ್ಯಮಂತ್ರಿ ಗಳು ಮಲೆನಾಡಿಗೆ ಭೇಟಿ ನೀಡಿ ಕಾಲುಸಂಕದ ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಅವರು ಕೂಡಲೇ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಕಾಲು ಸಂಕ ಅಭಿವೃದ್ಧಿ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಜು ಮೊಗವೀರ, ಜಿ.ಎನ್.ಹೆಗಡೆ ಮುರೇಗಾರ, ಬಸವರಾಜ ದೊಡ್ಮನಿ, ಪ್ರದೀಪ ಶೆಟ್ಟಿ, ಎಮ್.ಆರ್.ಕುಲಕರ್ಣಿ, ಶ್ರೀಲತಾ ಕಾಳೇರಮನೆ, ಚಂದ್ರು ಎಸಳೆ, ಅಶ್ವಿನಿ ಬಿ ಎಮ್. ಮುಂತಾದವರು ಇದ್ದರು.