ಕಾರವಾರ: ಕಳೆದ ವರ್ಷದ ಮಳೆಗಾಲದದಿಂದ ಪ್ರತಿಕ್ಷಣವೂ ಸಮುದ್ರಕೊರೆತದ ಭೀಕರತೆಗೆ ತಮ್ಮ ನೆಲ, ನೆಲೆ ಕಳೆದುಕೊಳ್ಳುತ್ತಿರುವ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ತೊಪ್ಪಲಕೇರಿ ಮಜರೆಯ ಅಮಾಯಕ ಜನರ ಜೀವದೊಂದಿಗೆ ಆಟವಾಡುತ್ತಿರುವ ಅಧಿಕಾರಿಗಳು ಇದುವರೆಗೂ ಯಾವ ಪರ್ಯಾಯ ವ್ಯವಸ್ಥೆಯನ್ನೂ ಮಾಡದೇ, ಈ ಸಲದ ಮಳೆಗಾಲದ ಆಕ್ರಂದನಕ್ಕೂ ತಲೆ ಕೆಡಿಸಿಕೊಳ್ಳದೇ ಅಮಾನವೀಯತೆ ಮೆರೆಯುತ್ತಿರುವುದು ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಸಮುದ್ರದಂಚಿಗೆ ಹರಡಿಕೊಂಡ ತೊಪ್ಪಲಕೇರಿ ಮಜರೆಯಲ್ಲಿ ನೂರಾರು ಜನರು ಬದುಕು ಕಟ್ಟಿಕೊಂಡಿದ್ದಾರೆ. ಯಾವತ್ತೂ ಸಮುದ್ರ ತನ್ನ ವಿಕಾರ ರೂಪವನ್ನು ಇಲ್ಲಿಯ ಜನರಿಗೆ ದರ್ಶಿಸಿದ್ದಿಲ್ಲ. ಕಳೆದ ವರ್ಷದ ಕುಂಭದ್ರೋಣ ಮಳೆ ಮಾತ್ರ ಈ ಮಜರೆಗೆ ಅಕ್ಷರಶಃ ದುಃಸ್ಸಪ್ನವಾಗಿ ಕಾಡಿತು. ಅದೇ ಸಂದರ್ಭದಲ್ಲಿ ರಾಕ್ಷಸನಂತೆ ಬಂದ ‘ಒಖೈ ಚಂಡಮಾರುತ’ ಕರಾವಳಿಯನ್ನು ತತ್ತರ ಗೊಳಿಸಿತು. ಕುಂಬಧ್ರೋಣ ಮಳೆಯೊಟ್ಟಿಗೆ ಈ ಚಂಡಮಾರುತದಿಂದಾಗಿ ಸಮುದ್ರದಲೆಗಳು ಎತ್ತರೆತ್ತರಕ್ಕೆ ಬಂದು ಬಡಬಗ್ಗರ ಗುಡಿಸಲು ತೋಟ ನುಗ್ಗಿ ಬದುಕನ್ನು ಚೆಲ್ಲಾಪಿಲ್ಲಿ ಮಾಡಿದವು ಸುರಿದ ಗಾಳಿಮಳೆಯ ಜೊತೆಗೆ ಸಮುದ್ರ ರಾತ್ರಿ ಬೆಳಗಾಗುವುದರೊಳಗೆ ತೊಪ್ಪಲಕೇರಿಯ ಅಂಚನ್ನು ಆಪೋಶನ ತೆಗೆದುಕೊಳ್ಳಲು ಆರಂಭಿಸಿತ್ತು. ದೈತ್ಯ ಗಾತ್ರದ ಸಮುದ್ರದ ಅಲೆಗಳು ತೊಪ್ಪಲಕೇರಿ ಗ್ರಾಮವನ್ನೇ ಕಬಳಿಸುತ್ತ ಬಂತು. ಅಲೆಗಳ ರಭಸಕ್ಕೆ ಮಾಧವ ನಾರಾಯಣ ನಾಯ್ಕ ಎಂಬುವವರ ಮನೆಯ ಬಳಿಯ ಲ್ಯಾಟರೈಟ್ ಮತ್ತು ಗ್ರೆನೈಟ್ ಕಲ್ಲಿನ ಏಪ್ರೋನ್ ಚಿಂದಿ ಚಿಂದಿಯಾಗಿ ಸಮುದ್ರದ ನಾಲಿಗೆ ನೇರವಾಗಿ ನುಗ್ಗಿ ಕುಡಿಯುವ ನೀರಿನ ಬಾವಿ, ತೋಟವನ್ನೆಲ್ಲ ಕಬಳಿಸಿತು. ಕಮಲಾಕರ ನಾಗಪ್ಪ ಮೆಸ್ತ, ಉದಯ ನಾಯ್ಕ ಅವರ ಮನೆಗಳಿಗೆ ಸಮುದ್ರದ ಅಲೆಗಳು ಬಡಿದು ಕುಸಿದು ಬೀಳುವ ಹಂತದಲ್ಲಿದೆ. ಹಾಗೆಯೇ ದೇವಿದಾಸ ನಾರಾಯಣ ನಾಯ್ಕ, ಮೋಹನದಾಸ ಸುಬ್ರಾಯ ನಾಯ್ಕ, ಸುನೀಲ ವರ್ಗೀಸ್, ಆನಂದ ದುರ್ಗಪ್ಪ ನಾಯ್ಕ, ಮಾದು ನಾಯ್ಕ, ಮುಂತಾದವರ ತೋಟಗಳು ಕೂಡ ಸಮುದ್ರ ಕೊರೆತಕ್ಕೆ ಆಹುತಿಯಾಗಿವೆ. ಸುಮಾರು 3 ಕಿ.ಮಿ. ಸಮುದ್ರದ ಅಂಚು ಕೊರೆತಕ್ಕೆ ಬಲಿಯಾದರೂ ಕೂಡ ಅದರಲ್ಲಿ ತೊಪ್ಪಲಕೇರಿಯ 400 ಮಿ. ಪ್ರದೇಶದಲ್ಲಿ ಮಾತ್ರ ಇನ್ನೇನು ಜನರ ಜೀವವನ್ನೇ ಬಲಿ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಸಮುದ್ರ ತನ್ನ ಅಟ್ಟಹಾಸ ಮೆರೆಯುತ್ತಿದೆ.
ವಾಸದ ಮನೆ, ಕಕ್ಕಸು ಕೋಣೆ, ಕೊಟ್ಟಿಗೆಗಳೆಲ್ಲ ಚಿಂದಿ ನಿರ್ನಾಮವಾದವು.. ಸಾಲು ಸಾಲು ತೆಂಗಿನ ಮರ, ಅಡಿಕೆ ಮರಗಳ ಬೇರುಗಳೆಲ್ಲ ಕತ್ತರಿಸಿಕೊಂಡು ಉಪ್ಪುನೀರಿಗೆ ಬಲಿಯಾಗಿ ಅವುಗಳ ಚಂಡೆಗಳೆಲ್ಲ ಹಾರಿಹೋದವು. ಬಿರುಕು ಬಿಟ್ಟ ಕುಡಿಯುವ ನೀರಿನ ಬಾವಿ ತುಂಬ ಸಮುದ್ರದ ನೀರು ಕಸಕಡ್ಡಿ ತುಂಬಿ ಉಪ್ಪುಉಪ್ಪಾದವು. ಅಮಾಯಕ ಮಂದಿ ಏನು ಮಾಡಬೇಕೆಂತ ಗೊತ್ತಾಗದೇ ಕಕ್ಕಾಬಿಕ್ಕಿಯಾಗಿದ್ದಾರೆ. ಅಂದಿನ ಶಾಸಕಿ ಶಾರದಾ ಶೆಟ್ಟಿ ಅವರು ಸ್ಥಳಕ್ಕೆ ಬಂದರು. ಅವರು ನಿಂತ ಸ್ಥಳದಲ್ಲೇ ಸಮುದ್ರದ ಅಲೆಯೊಟ್ಟಿಗೆ ಬಂಡೆಯ ಚೂರೊಂದು ಬಂದು ಅವರ ಕಾಲಿಗೆ ಬಡಿದವು. ಶಾಸಕರು ತಕ್ಷಣ ಕ್ರಮಕೈಗೊಳ್ಳುವುದಾಗಿ ಹೇಳಿ ಜಿಲ್ಲಾಧಿಕಾರಿಗಳಿಗೆ ಬರೆದರು. ತಹಸೀಲ್ದಾರರು ಬಂದು ಹೋದರು. ಒಳನಾಡು ನೀರಾವರಿ ಮತ್ತು ಬಂದರು ಇಲಾಖೆಯ ಸಹಾಯಕ ಇಂಜಿನಿಯರ್ ಸ್ಥಳ ಪರಿಶೀಲಿಸಿದರು. ಎಲ್ಲರೂ ಜಿಲ್ಲಾಧಿಕಾರಿಗಳಿಗೆ, ಜೊತೆಗೆ ತಮ್ಮ ಇಲಾಖೆಯ ಮೇಲಾಧಿಕಾರಿಗಳಿಗೆ ವರದಿ ಒಪ್ಪಿಸಿ ಸುಮ್ಮನಾಗಿಬಿಟ್ಟರು. ಜಿಲ್ಲಾಧಿಕಾರಿಗಳೂ ಕೂಡ ವಿಕಾಸ ಸೌಧದ ಲೋಕೋಪಯೊಗಿ ಇಲಾಖೆಯ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕೈ ಚೆಲ್ಲಿದರು. ಇದೀಗ ನೂತನ ಶಾಸಕರಾದ ದಿನಕರ ಕೆ.ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇವೆಲ್ಲದರ ನಡುವೆ ಊರ ಜನರು ಮಾತ್ರ ತಮ್ಮ ಮಕ್ಕಳು ಮರಿಗಳೊಟ್ಟಿಗೆ ಒಂದೊಂದು ಹಗಲು, ಒಂದೊಂದು ರಾತ್ರಿಯನ್ನು ಜೀವ ಕೈಯಲ್ಲಿ ಹಿಡಿದು ದಿನ ದೂಡುತ್ತ ಬಂದಿದ್ದಾರೆ.
ಸ್ಥಳೀಯ ನಿವಾಸಿ ಮಾಧವ ನಾರಾಯಣ ನಾಯ್ಕ ಅವರು ಅಪಾಯಕ್ಕೀಡಾದ ಸ್ಥಳದಲ್ಲಿ ತಡೆಗೋಡೆ ನಿಮಿಸಿಕೊಡುವಂತೆ ಸಾರ್ವಜನಿಕರ ಪರವಾಗಿ ಕಳೆದ ಒಂದು ವರ್ಷದಿಂದ ಹೊನ್ನಾವರದಿಂದ ಬೆಂಗಳೂರಿನವರೆಗಿನ ಅಧಿಕಾರಿಗಳೆಲ್ಲ ಸರಣಿ ಪತ್ರ ಬರೆದು ಬಹುಧೀರ್ಘ ಹೋರಾಟವನ್ನೇ ಮಾಡಿದರು. ಫಲಿತಾಂಶ ಮಾತ್ರ ಶೂನ್ಯವಾಗಿದೆ. ಉಸಿರು ಉಳಿಸಿಕೊಡುವಂತೆ ಕೊನೆಯ ಪ್ರಯತ್ನವಾಗಿ ಮಾನವ ಹಕ್ಕು ಆಯೋಗಕ್ಕೂ ಬರೆದರು. ಆದರೆ ಅವರೂ ಕೂಡ ಮತ್ತೊಬ್ಬ ಅಧಿಕಾರಿಗೆ ಪತ್ರಗಳನ್ನು ಬರೆಯುವ ಕೆಲಸ ಮಾಡಿದರೇ ಹೊರತು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಒದಗಿಸಲಿಲ್ಲ.
ಬಾಧಿತ 400 ಮಿ. ಪ್ರದೇಶಕ್ಕೆ ತುರ್ತು ತಡೆಗೋಡೆ ಕಾಮಗಾರಿ ಕೈಗೊಳ್ಳಲು ಅನುವಾಗುವಂತೆ ರೂ.127.00 ಲಕ್ಷ ಅನುದಾನವನ್ನು ಲೆಕ್ಕ ಶೀರ್ಷಿಕೆಯಲ್ಲಿ ಒದಗಿಸಿ ಅಂದಾಜು ಪಟ್ಟಿಗೆ ಒದಗಿಸಿ ಸರಕಾರದ ಆಡಳಿತ ಮಂಜೂರಾತಿ ನೀಡಲು ಇಲ್ಲಿಯ ಬಂದರು ಮತ್ತು ಒಳನಾಡು ಜಲಸಾರಿಗೆ ನಿರ್ದೇಶನಾಲಯದ ನಿರ್ದೇಶಕರು ತಮ್ಮ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಬೆಂಗಳೂರು ಅವರಿಗೆ 2017 ನವೆಂಬರ್ 25 ರಂದು ಪತ್ರ ಬರೆದಿದ್ದಾರೆ. ಆದರೆ ಆ ಪತ್ರ ಈವರೆಗೂ ಕಂಡ ಕಂಡ ಅಧಿಕಾರಿಗಳ ಮೇಜು ದಾಟುತ್ತಿದೆಯೇ ಹೊರತು ಫಲಶೃತಿ ಕಂಡಿಲ್ಲ. ಕಳೆದ ವರ್ಷ ಮಳೆಗಾಲದಲ್ಲಿ ಸಂಭವಿಸಿದ ಈ ಸಮುದ್ರ ಕೊರೆತಕ್ಕೆ ಈ ವರ್ಷದ ಮಳೆಗಾಲದಲ್ಲೂ ಪರಿಹಾರ ಸಾಧ್ಯವಾಗಿಲ್ಲ ಅಂದರೆ ಸರಕಾರಿ ವ್ಯವಸ್ಥೆಯ ಬಗ್ಗೆ ಹಿಡಿ ಶಾಪ ಹಾಕುತ್ತಿರುವ ಸ್ಥಳೀಯರು ಚುನಾವಣೆ, ಪ್ರಜಾಪ್ರಭುತ್ವ ಇವೆಲ್ಲ ಕೇವಲ ಆಡಂಭರಕ್ಕಾಗಿಯೇ ಎಂದು ನೋವಿನಿಂದ ಪ್ರಶ್ನಿಸುತ್ತಿದ್ದಾರೆ.
2017 ಕಳೆದ ಜೂನ್ ತಿಂಗಳಿನಿಂದ ನಾನು ಜಿಲ್ಲಾಧಿಕಾರಿಗಳು, ಒಳನಾಡು ಜಲ ಸಾರಿಗೆ ಅಧಿಕಾರಿ, ಮಾನವ ಹಕ್ಕು ಆಯೋಗ ಹೀಗೆ ಎಲ್ಲ ಅಧಿಕಾರಿಗಳಿಗೂ ತೊಪ್ಪಲಕೇರಿ ಸಮುದ್ರಕೊರೆತಕ್ಕೆ ಪರಿಹಾರ ಒದಗಿಸಿಕೊಡುವಂತೆ ಮನವಿ ಮಾಡುತ್ತಲೇ ಬಂದೆ. ಆದರೆ ಇದೀಗ ಹತಾಶನಾಗಿ ಸೋತ ಭಾವ ಕಾಡುತ್ತಿದೆ. ಜಿಲ್ಲಾಧಿಕಾರಿಗಳಿಗಂತೂ ತುಂಬ ಪತ್ರ ಬರೆದೆ. ಅವರ ವಾಟ್ಸಾಪ್ ಗೂ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿ ತುಂಬ ಸಂದೇಶ ರವಾನಿಸಿದೆ. ಒಮ್ಮೆ ಸ್ಥಳಕ್ಕೆ ಬಂದು ಪರಿಶೀಲಿಸುವಂತೆ ವಿನಂತಿಸಿದೆ. ಆದರೆ ಜಿಲ್ಲಾಧಿಕಾರಿಗಳೂ ಸಮಸ್ಯೆಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ದುರದೃಷ್ಟವಶಾತ್ ಸಮಸ್ಯೆ ಕೈಮೀರಿ ಸಾಲು ಸಾಲು ಹೆಣಗಳು ಮಲಗಿದರೆ ಅಧಿಕಾರಿಗಳು ಪರಿಹಾರ ಕೊಡಲಾದರೂ ಬರಬಹುದು.
– ಮಾಧವ ನಾರಾಯಣ ನಾಯ್ಕ ತೊಪ್ಪಲಕೇರಿ