ಕುಮಟಾ: ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಇತಿಹಾಸ ಸಂಘ ಸ್ಥಳೀಯ ಯುವಬ್ರಿಗೇಡ್ ಸಹಯೋಗದೊಂದಿಗೆ ಕಾರ್ಗಿಲ್ ವಿಜಯ ದಿವಸವನ್ನು ವಿಶಿಷ್ಠವಾಗಿ ಆಯೋಜಿಸಿತ್ತು.
ಭಾರತಾಂಬೆಗೆ ಪೂಜೆಸಲ್ಲಿಸಿ ಕಾರ್ಗಿಲ್ ಯುದ್ದ ಗೆಲುವಿಗೆ ಹುತಾತ್ಮರಾದ ಯೋಧರನ್ನು ಸ್ಮರಿಸುತ್ತಾ ದೇಶಾಭಿಮಾನ ಮತ್ತು ಪ್ರೇಮವನ್ನು ಮಕ್ಕಳಲ್ಲಿ ಮೂಡಿಸುವಲ್ಲಿ ಯಶಸ್ವಿಯಾಯಿತು. ಯುವ ಬಿಗ್ರೇಡ್ ವತಿಯಿಂದ ಇತಿಹಾಸ ತಜ್ಞ ಅಧ್ಯಾಪಕ ಈಶ್ವರ ಭಟ್ಟ ಕಾರ್ಗಿಲ್ ಯುದ್ದ ಸಂದರ್ಭ, ಸೈನಿಕರ ಕೆಚ್ಚೆದೆಯ ಹೋರಾಟ, ಎದುರಿಸಿದ ಭೀಕರತೆಯನ್ನು ಹೃದಯಂಗಮವಾಗಿ ತೆರೆದಿಟ್ಟರು. ಹುತಾತ್ಮರ ಸ್ಮರಣೆಯೇ ನಮ್ಮ ಆರಾಧನೆಯಾಗಬೇಕೆಂದರು.
ನಮ್ಮ ಯೋಧರು ಎಂದಿಗೂ ಬೆನ್ನು ತೋರಿಸದೇ ಎದೆಸೆಟೆದು ನಿಂತು ಹೋರಾಡಿ ಪರಮವೀರ ಚಕ್ರ ಪಡೆದವರೇ ಆಗಿದ್ದಾರೆ ಎಂದರು. ಪ್ರಮುಖ ಸೇನಾನಿಗಳ ಯುದ್ಧ ಪರಾಕ್ರಮಗಳನ್ನು ವಿವರಿಸಿದರು. ಮುಖ್ಯಾಧ್ಯಾಪಕ ಎನ್.ಆರ್.ಗಜು ಮಾತನಾಡುತ್ತಾ, ಯುದ್ದದಲ್ಲಿ ಮಡಿದ ಯೋಧನೊಬ್ಬನ ಸಮಾಧಿಯ ಮೇಲೆ “ನಾನೊಬ್ಬ ಅಪರಿಚಿತನಿಗಾಗಿ ನನ್ನ ಪ್ರಾಣವನ್ನು ಅರ್ಪಿಸಿದ್ದೇನೆ. ಆ ಅಪರಿಚಿತ ಬೇರಾರೂ ಅಲ್ಲ, ನೀನೇ!” ಎಂಬ ಮನಕಲಕುವ ಸಾಲುಗಳನ್ನು ಸ್ಮರಿಸುತ್ತಾ, ಚಿತ್ರಿಗಿ ಸುತ್ತುಮುತ್ತಲಿನ ಕೆಲವರು ಸೈನ್ಯ ಸೇರುತ್ತಿರುವುದನ್ನು ಉದಾಹರಿಸಿದರು. ಶಿಕ್ಷಕ ವಿ.ಎನ್.ಭಟ್ಟ ಮಾತನಾಡುತ್ತಾ, ನಮ್ಮ ಕಾಪಾಡುವ ಸೈನಿಕರಿಗೆ ಸರಿಸಾಟಿಯಾಗಿ ಯಾರೂ ನಿಲ್ಲಲಾರರು ಎಂದು ಅಭಿಪ್ರಾಯಿಸಿದರು. ಯುವ ಬಿಗ್ರೇಡಿನ ಕಿಶೋರ ಮತ್ತು ಶಿಕ್ಷಕವೃಂದದವರು ಉಪಸ್ಥಿತರಿದ್ದರು.