ಕಳೆದ ಎರಡು ದಿನಗಳ ಹಿಂದೆ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಂಡಿದ್ದು, ಸಣ್ಣ ಪುಟ್ಟ ಚಿಕಿತ್ಸೆಗಳ ನಂತರ ಗುಣಮುಖರಾಗಿದ್ದಾರೆ. ಪೂಜ್ಯರಿಗೆ ವಿಶ್ರಾಂತಿ ಅಗತ್ಯವಾದ್ದರಿಂದ ಚಾತುರ್ಮಾಸ್ಯ ವ್ರತದ ಸ್ಥಳ ಹಾಗೂ ದಿನಾಂಕಗಳನ್ನು ಬದಲಾಗಿಸಲಾಗಿದೆ. ಶ್ರೀಸಂಸ್ಥಾನದವರು ಕ್ಷೇಮವಾಗಿದ್ದು, ಶಿಷ್ಯ ಭಕ್ತರು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಶ್ರೀಗಳ ಆರೋಗ್ಯದ ನಿಗಾವಹಿಸುವ ಡಾ. ವೇಣುಗೋಪಾಲ್ ಅವರು ತಿಳಿಸಿದ್ದಾರೆ.
ಶ್ರೀಮಠದ ಶಿಷ್ಯ ಭಕ್ತರ ಆಗ್ರಹ, ಹಿರಿಯ ಕಾರ್ಯಕರ್ತರ ವಿಜ್ಞಾಪನೆ ಹಾಗೂ ವೈದ್ಯರ ಸಲಹೆಯನ್ನು ಮನ್ನಿಸಿ; ಪೂಜ್ಯ ಶ್ರೀಸಂಸ್ಥಾನದವರು ಸಿದ್ದಾಪುರದ ಭಾನ್ಕುಳಿ ಮಠದ ಬದಲಾಗಿ ಗಿರಿನಗರದ ಶಾಖಾ ಮಠದಲ್ಲಿ ಮಠೀಯ ಪದ್ಧತಿಯಂತೆ ಚಾತುರ್ಮಾಸ್ಯ ವ್ರತದೀಕ್ಷೆಯನ್ನು ಕೈಗೊಳ್ಳುತ್ತಿದ್ದಾರೆ.
ಕಿಡ್ನಿ ಸ್ಟೋನ್ ಹೊರತಾಗಿ ಶ್ರೀಗಳಿಗೆ ಬೇರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರುವುದಿಲ್ಲ. ಈ ಕುರಿತಾಗಿ ಯಾವುದೇ ವದಂತಿಗಳಿಗೆ ಕಿವಿಗೊಡಬೇಕಾದ ಅವಶ್ಯಕತೆ ಇಲ್ಲ, ಶ್ರೀಗಳು ಆರೋಗ್ಯದಿಂದಿದ್ದು ಭಕ್ತರು ಆತಂಕ ಪಡಬೇಕಾಗಿಲ್ಲ ಎಂದು ಶ್ರೀಗಳ ಆರೋಗ್ಯದ ನಿಗಾ ವಹಿಸಿರುವ ತಜ್ಞ ವೈದ್ಯಕೀಯ ತಂಡದ ಪರವಾಗಿ ಡಾ. ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.