ಹೊನ್ನಾವರ: `ನಾಗರಿಕ ಸೇವೆಗಳಾದ ಐಎಸ್, ಐಆರ್‍ಎಸ್, ಐಪಿಎಸ್, ಐಎಫ್‍ಎಸ್ ಹಾಗೂ ಕೆಎಎಸ್‍ಗಳು ನಾಗರಿಕ ಸೇವಾ ಕಾರ್ಯಾಗಾರದ ಮೂಲಕ ಜಿಲ್ಲೆಯ 2 ಸಾವಿರ ಆಕಾಂಕ್ಷಿಗಳಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗುವುದು’ ಎಂದು ಜೆ.ಡಿ.ಎನ್. ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ನಾಗೇಶ ದೇವಾಡಿಗ ತಿಳಿಸಿದರು.
ಪಟ್ಟಣದ ಸಾಗರ ರೆಸಿಡೆನ್ಸಿ ಸಭಾಭವನದಲ್ಲಿ ಜೆ.ಡಿ.ನಾಯ್ಕ ಅಭಿಮಾನಿ ಬಳಗದ ಆಶ್ರಯದಲ್ಲಿ ಡ್ರೀಮ್ ಟೀಮ್ ಹೊನ್ನಾವರ, ರೋಟರಿ ಕ್ಲಬ್, ಲಾಯನ್ಸ ಕ್ಲಬ್ ಹಾಗೂ ಎಸ್.ಡಿ.ಎಮ್. ಕಾಲೇಜಿನ ಸಹಕಾರದಲ್ಲಿ ಸೋಮವಾರ ನಡೆದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಗರಿಕ ಸೇವಾ ಕಾರ್ಯಾಗಾರ ಸೆ. 24 ರಂದು ವಿವಿಧ ಜಿಲ್ಲೆಗಳಲ್ಲಿ ನಡೆಯಲಿದ್ದು, ಉಡುಪಿ, ದಕ್ಷಿಣ-ಕನ್ನಡ, ಶಿವಮೊಗ್ಗ ಹಾಗೂ ಉತ್ತರ-ಕನ್ನಡ ಜಿಲ್ಲೆಯ 2000 ಆಕಾಂಕ್ಷೆಗಳಿಗೆ ಪ್ರವೇಶವನ್ನು ಕಲ್ಪಿಸಲಾಗುವುದು. ಉಚಿತ ನೋಂದಣಿ ಹಾಗೂ ಊಟೋಪಚಾರ ವ್ಯವಸ್ಥೆ ಇದ್ದು, ಈ ಕಾರ್ಯಾಗಾರದಲ್ಲಿ ದೇಶದ ಪ್ರಮುಖ ಐಎಎಸ್, ಐಪಿಎಸ್, ಐಎಫ್‍ಎಸ್‍ನ 20 ಪ್ರತಿಷ್ಠಿತ ಅಧಿಕಾರಿಗಳು ಉಪನ್ಯಾಸ ನೀಡಲಿದ್ದಾರೆ. ಇದರಲ್ಲಿ 200 ಶ್ರೇಯಾಂಕಿತರನ್ನು ಆಯ್ಕೆಗೊಳಿಸಿ ವಿವಿಧ ಅಕಾಡೆಮಿಗಳ ಮೂಲಕ ತರಬೇತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ರೋಟರಿ ಕ್ಲಬ್‍ನ ಅಧ್ಯಕ್ಷ ಎ.ಎಸ್.ಶಾಸ್ತ್ರಿ ಮಾತನಾಡಿ ನಾಗರಿಕ ಸೇವೆಗಳಾದ ಐಎಸ್, ಐಆರ್‍ಎಸ್, ಐಪಿಎಸ್, ಐಎಫ್‍ಎಸ್ ಹಾಗೂ ಕೆಎಎಸ್‍ಗಳು ಗಗನಕುಸುಮಗಳಲ್ಲ. ಸರಿಯಾದ ಮಾರ್ಗದರ್ಶನ ಹಾಗೂ ತರಬೇತಿಯಿಂದ ವಿದ್ಯಾರ್ಥಿಗಳು ಈ ಅತ್ಯುತ್ತಮ ಶಿಕ್ಷಣ ಪಡೆಯಲು ಸಾಧ್ಯವಿದೆ. ಉತ್ತರ-ಕನ್ನಡ ಜಿಲ್ಲೆ ಹಾಗೂ ಹೊನ್ನಾವರ ತಾಲೂಕು ಶೈಕ್ಷಣಿಕವಾಗಿ ರಾಜ್ಯಕ್ಕೆ ಮೂಂಚೂಣಿಯಲ್ಲಿ ಇದ್ದರೂ ಬೇರೆ ರಾಜ್ಯಕ್ಕೆ ಹೋಲಿಸಿದರೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ನಾಗರಿಕಸೇವೆ ನೀಡತಕ್ಕ ಅಧಿಕಾರಿಗಳು ನೇಮಕಗೊಳ್ಳುವಲ್ಲಿ ತೀರಾ ಹಿಂದುಳಿದಿದೆ. ಹೀಗಾಗಿ ವಿಶೇಷವಾಗಿ ಪ್ರಜ್ಞಾವಂತ ನಾಗರಿಕರಿಕರಿಗಾಗಿ ಈ ನಾಗರಿಕ ಸೇವಾ ಕಾರ್ಯಾಗಾರ ಸಹಕಾರಿಯಾಗಲಿದೆ ಎಂದರು.
ಸತ್ಯಾ ಜಾವಗಲ್ ಮಾತನಾಡಿ ಭಟ್ಕಳದಲ್ಲಿ ನಡೆಯುವ ಕಾರ್ಯಾಗಾರಕ್ಕೆ ನೊಂದಣಿ ಹಾಗೂ ಮಾಹಿತಿಗಾಗಿ ಜು. 15ರ ಬೆಳಿಗ್ಗೆ 9:30 ಗಂಟೆಗೆ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸಭೆಯನ್ನು ಕರೆಯಲಾಗಿದೆ. ನಾಗರಿಕ ಸೇವಾ ಶಿಕ್ಷಣ ಆಕಾಂಕ್ಷಿಗಳು ಹಾಗೂ ಪಾಲಕರು ಪಾಲ್ಗೋಳಬೇಕೆಂದು ತಿಳಿಸಿದರು.
ಜಿ.ಜಿ.ಶಂಕರ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಎಸ್.ಎಸ್.ಹೆಗಡೆ, ಲಯನ್ಸ್ ಕ್ಲಬ್ ಅಧ್ಯಕ್ಷ ಡಿ.ಡಿ.ಮಡಿವಾಳ, ಜೆ.ಟಿ.ಪೈ ಹಾಗೂ ನಿವೃತ್ತ ಉಪನ್ಯಾಸಕ ಜಿ.ಪಿ.ಹೆಗಡೆ, ರಾಜು ಮಾಳಗಿಮನೆ, ಸುರೇಶ ಹೊನ್ನಾವರ, ಕಿರಣ ಹೊನ್ನಾವರಕರ ಇತರರು ಉಪಸ್ಥಿತರಿದ್ದರು. ಪ್ರಶಾಂತ ಹೆಗಡೆ ನಿರೂಪಿಸಿದರು.