ಕುಮಟಾ: ತಾಲೂಕಿನ ಎಲ್ಲ 35 ಪ್ರೌಢಶಾಲೆಗಳ ದೈಹಿಕ ಶಿಕ್ಷಕರು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಸಭೆ ಸೇರಿ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದ ವಾರ್ಷಿಕ ಚಟುವಟಿಕೆಗಳ ಸಿಂಹಾವಲೋಕನ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ತಾಲೂಕಾ ದೈಹಿಕ ಶಿಕ್ಷಕರ ಸಂಘದಡಿಯಲ್ಲಿ ಹಮ್ಮಿಕೊಂಡ ಒಂದು ದಿನದ ಕಾರ್ಯಾಗಾರವನ್ನು ಪ್ರಭಾರ ಶಿಕ್ಷಣಾಧಿಕಾರಿ ಗಣೇಶ ನಾಯ್ಕ ದೀಪ ಬೆಳಗಿ ಉದ್ಘಾಟಿಸಿ, ಮಾನಸಿಕ ಮತ್ತು ದೈಹಿಕ ಸದೃಢತೆಗೆ ದೈಹಿಕ ಶಿಕ್ಷಣ ಮೂಲಭೂತವಾದುದು.

ಇಂದಿನ ಗಂಭೀರ ಆರೋಗ್ಯ ಸಮಸ್ಯೆಗಳಾದ ಬಿಪಿ-ಸುಗರ್ ನಿಯಂತ್ರಣಕ್ಕೆ ಯೋಗ ಮತ್ತು ವೇಗನಡಿಗೆಯಂತಹ ದೈಹಿಕ ವ್ಯಾಯಾಮಗಳು ನಿಯಂತ್ರಕಗಳಾಗಬಲ್ಲವು ಮತ್ತು ಇಂದು ಪಠ್ಯಕ್ಕಿಂತ ಇದು ಮಹತ್ತರವಾದುದು ಎಂದು ಅಭಿಪ್ರಾಯಪಟ್ಟರು. ಪ್ರಾರಂಭದಲ್ಲಿ ಸ್ನೇಹ ಮತ್ತು ಸಂಗಡಿಗರು ಪ್ರಾರ್ಥಿಸಿದರು.

RELATED ARTICLES  ಕಾರವಾರ ಕರಾವಳಿ ಉತ್ಸವ 2017ಕ್ಕೆ ಬರುತ್ತಾರಾ ಬಾಲಿವುಡ್ ಸಿಂಗರ್ ಶಾಲ್ಮಲಿ ಕೊಳ್ಗಡೆ?

ಶಿಕ್ಷಕ ಕಿರಣ ಪ್ರಭು ಸ್ವಾಗತಿಸಿದರು. ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜಿ.ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್.ಭಟ್ಟ ಕ್ರೀಡೋತ್ಸವಗಳಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ವಿವರ ಒದಗಿಸಿದರು. ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್ ರೊಡ್ರಗೀಸ್ ತಾಲೂಕಿನಿಂದ ಕ್ರೀಡಾ ಪ್ರತಿಭೆಗಳು ಹೆಚ್ಚೆಚ್ಚು ಹೊರಬರುವಂತಾಗಲಿ ಎಂದು ಹಾರೈಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು ಮಾತನಾಡಿ ಮಕ್ಕಳ ಬೌದ್ಧಿಕ ಮತ್ತು ದೈಹಿಕ ಶಿಕ್ಷಣ ಸಮತೋಲಿತವಾದಾಗ ಸೋಲೇ ಎದುರಾದರೂ ಆತ್ಮಹತ್ಯೆಯಂತಹ ಯೋಚನೆಗಳು ಬರದೇ ಹಾಗೂ ಮಿಥ್ಯಾರೋಪಗಳು ಹೊರಿಸಲ್ಪಟ್ಟಾಗಲೂ ಎದುರಿಸುವ ಛಲಗಾರಿಕೆ ಬಾಳಲ್ಲಿ ಒಡಮೂಡುತ್ತವೆ ಎಂದು ಅಭಿಪ್ರಾಯಪಟ್ಟರು.

RELATED ARTICLES  ಕುಷ್ಠ ರೋಗ: ರಾಜ್ಯದಲ್ಲಿಯೇ ಉತ್ತರಕನ್ನಡ ಜಿಲ್ಲೆಗೆ 4ನೇ ಸ್ಥಾನ!

ದೈಹಿಕ ಶಿಕ್ಷಕರಾದ ವಾಸುದೇವ ಗೌಡ ಮತ್ತು ಅರುಣ ನಾಯ್ಕ ಥ್ರೋ ಬಾಲ್ ಆಟದ ನೂತನ ನಿಯಮಗಳನ್ನು ಸಾದರಪಡಿಸಿದರು. ದೈಹಿಕ ಶಿಕ್ಷಕ ಸಂಘದ ಕಾರ್ಯದರ್ಶಿ ಎಂ.ಆಯ್.ಭಟ್ಟ ವಂದಿಸಿದರು. ಹಿರಿಯ ದೈಹಿಕ ಶಿಕ್ಷಕ ಲಕ್ಷ್ಮಣ ಅಂಬಿಗ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿಠೋಬ ನಾಯಕ ಮಾರ್ಗದರ್ಶನ ನೀಡಿದರು.