ಶಿರಸಿ : ತಾಲೂಕಿನ ಶಿರಸಿ ಸಿದ್ದಾಪುರ ಹೆದ್ದಾರಿಯಲ್ಲಿ ಯುವಾ ಬ್ರಿಗೇಡ್ ಕಾರ್ಯಕರ್ತರು ಸ್ವಚ್ಛ ಹೆದ್ದಾರಿ ಅಭಿಯಾನದ ಸತತ ಆರನೇ ಹಂತದ ಸ್ವಚ್ಛತಾ ಕಾರ್ಯ‌ ಮಾಡಿದರು. ಯಥಾ‌ ಪ್ರಕಾರ ಮಧ್ಯದ ಬಾಟಲಿಗಳು, ನ್ಯಾಪಕಿನ್‍ಗಳು, ಮಾಂಸದ ತ್ಯಾಜ್ಯಗಳು, ಜೈವಿಕ ತ್ಯಾಜ್ಯಗಳು, ಅನುಪಯುಕ್ತ ದಿನಬಳಕೆ ವಸ್ತುಗಳು ಸೇರಿದಂತೆ ರಸ್ತೆಯ ಎರಡೂ ಬದಿಗಳೂ ಕೊಳಕಿನಿಂದ ತುಂಬಿಹೋಗಿತ್ತು. ಇದು ಶಿರಸಿ ಪಟ್ಟಣದಿಂದ ಕೇವಲ ಒಂದು ಕಿಮೀ ದೂರದಲ್ಲಿದ್ದು ಪಟ್ಟಣದ ಮನೆ ಅಥವಾ ಅಂಗಡಿ ಇಟ್ಟವರು ಇಲ್ಲಿ ತ್ಯಾಜ್ಯಗಳನ್ನು ತಂದು ಎಸೆಯುತ್ತಿದ್ದಾರೆ ಎನ್ನಲಾಗಿದೆ.

ಕಳವಳಕಾರಿ ಅಷ್ಟೇ ನೋವಿನ ಸಂಗತಿ ಅಂದರೆ ಯುವಾ ಬ್ರಿಗೇಡ್ ಕಾರ್ಯಕರ್ತರು ಈ ಹಿಂದೆ ಸ್ವಚ್ಛತೆ ಮಾಡಿದ ಸ್ಥಳದಲ್ಲೇ ಸ್ವಚ್ಛ ಮಾಡಿದ್ದೇ ಸುಳ್ಳು ಎಂಬಷ್ಟರ ಮಟ್ಟಿಗೆ ಪುನಃ ಕಸಗಳನ್ನು ತಂದು ಎಸೆಯಲಾಗುತ್ತಿದೆ.

RELATED ARTICLES  ಅಪೂರ್ಣವಾಗಿದೆ ಗಂಗಾವಳಿ ಸೇತುವೆ ಕಾಮಗಾರಿ : ಗ್ರಾಮಸ್ಥರ ಆಕ್ಷೇಪ.

ಹೆದ್ದಾರಿಯಿಂದ ಒಂದು ಐವತ್ತು ಮೀಟರ್ ಒಳಗೆ ಹೋದಾಗ ಅಲ್ಲಿನ ಕಸದ ರಾಶಿ, ಬಾಟಲಿಗಳು, ಪೇಪರ್ ಕಪ್, ತಟ್ಟೆಗಳ ನೂರಾರು ಸಂಖ್ಯೆಯಲ್ಲಿ ಇದ್ದಿದ್ದು‌ ನೋಡಿ ದಂಗಾಗುವ ಪರಿಸ್ಥಿತಿ ಕಾರ್ಯಕರ್ತರದ್ದಾಗಿತ್ತು. ಹೆದ್ದಾರಿ ಬದಿಯ ಜಾಗಗಳು ಮಧ್ಯಪಾನ ಮಾಡುವ, ಗಾಂಜಾ-ಇಸ್ಪೀಟು ದಂಧೆಗಳ ಕಾರ್ಯಕ್ಷೇತ್ರವಾಗಿರುವುದು ಕಂಡುಬಂದಿರುತ್ತದೆ.

ಸಾರ್ವಜನಿಕರು ತತಕ್ಷಣ ಎಚ್ಚೆತ್ತುಕೊಳ್ಳಬೇಕಿದ್ದು,‌‌ ಇಲ್ಲದಿದ್ದಲ್ಲಿ ಅನೇಕ ರೋಗಗಳು ಹರಡುವ ಸಂಭವ ಇದೆ. ಈ ನಿಟ್ಟಿನಲ್ಲಿ ಯುವಾ ಬ್ರಿಗೇಡ್ ಪ್ರತಿ ವಾರ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳುತ್ತಿದ್ದು, ನಾಗರಿಕರು ಸಹಕರಿಸಲು ಕೋರಿದೆ.

“ಯುವಾ ಬ್ರಿಗೇಡಿನ ಸ್ವಚ್ಛತಾ ಅಭಿಯಾನಗಳಲ್ಲಿ ಶಿರಸಿ ನಗರಸಭೆಯವರ ಸಹಕಾರ ಶ್ಲಾಘನೀಯ. ನಾವು ಸ್ವಚ್ಛಗೊಳಿಸಿದ ಸ್ಥಳ ಪಟ್ಟಣ ವ್ಯಾಪ್ತಿಯಿಂದ ತುಸು ಹೊರಗಿದ್ದರೂ, ಪ್ರತಿ ವಾರ ಕಸ ವಿಲೇವಾರಿ ವಾಹನವನ್ನು ಮತ್ತು ಸಿಬ್ಬಂದಿಗಳನ್ನು ಕಳುಹಿಸಿ ನಾವು ಸ್ವಚ್ಚಗೊಳಿಸಿದ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಾ ಬಂದಿದೆ. ನಗರಸಭೆ ಎಲ್ಲಾ ಕಡೆಗಳಲ್ಲಿ ಕಸ ಸಂಗ್ರಹಣೆಯ ವಾಹನಗಳನ್ನು ಕಳಿಸಿಕೊಡುತ್ತಿದೆ. ನಾಗರಿಕರಾದ ನಾವು ರಸ್ತೆಯ ಮೇಲೆ ಕಸಗಳನ್ನು ಚೆಲ್ಲದೇ, ಕಸದ ವಾಹನದಲ್ಲಿಯೇ ಹಾಕುವುದು ನಮ್ಮ ಜವಾಬ್ದಾರಿ ಆಗಿದೆ. ಸ್ವಚ್ಛತೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಂಸೆ ಗಳಿಸಿರುವ ಶಿರಸಿ ನಗರದ ಸ್ವಾಸ್ಥ್ಯವನ್ನು ಕಾಪಾಡಲು ನಾವುಗಳು ನಗರಸಭೆಯವರ ಜೊತೆ ಕೈಜೋಡಿಸಬೇಕಿದೆ. ಶಿರಸಿಯ ಸ್ವಚ್ಛತೆಯನ್ನು ಕಾಪಾಡಲು ಸಾರ್ವಜನಿಕ ವಲಯ ಎಲ್ಲ ಕ್ಷೇತ್ರದ ಪ್ರಮುಖರ ಮಾರ್ಗದರ್ಶನದಲ್ಲಿ ಒಂದು ಸಮಿತಿಯನ್ನು ರಚಿಸುವ ಯೋಜನೆ ಹೊಂದಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಕಾರ್ಯೋನ್ಮುಖರಾಗಲಿದ್ದೇವೆ”

RELATED ARTICLES  ಬೆಳಗಿನ ಹೆಲ್ತ್ ಬುಲೆಟಿನ್ ನಲ್ಲಿ ಉತ್ತರಕನ್ನಡಿಗರಿಗೆ ನೆಮ್ಮದಿ : ಯಾವುದೇ ಪ್ರಕರಣದ ಉಲ್ಲೇಖವಿಲ್ಲ.

~
ಶಿಶಿರ್‌ ಅಂಗಡಿ