ಶಿರಸಿ: ತಾಲೂಕಿನ ಬಂಡಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ನೈರ್ಮಲ್ಯ ಇಲ್ಲದ ಪರಿಣಾಮದ ನೊಣದ ಉತ್ಪತ್ತಿ ಅಧಿಕಗೊಂಡು ರೋಗ ಭೀತಿಯ ವಾತಾವರಣ ನಿರ್ಮಾಣಗೊಂಡಿದೆ ಎನ್ನಲಾಗಿದ್ದು ಇದೀಗ ಜನತೆ ಭಯ ಪಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ .ಹೊಸಕೆರೆ ಬಳಿಯ ಖಾಸಗಿ ಕೋಳಿ ಫಾರಂನಿಂದ ಹೊರ ಎಸೆಯಲಾದ ಸತ್ತ ಕೋಳಿಗಳು ವಾತಾವರಣ ಕೆಡಲು ಕಾರಣವಾಗಿದೆ. ಸತ್ತ ಕೋಳಿಗಳು ಹೊಸಕೆರೆಯ ಹತ್ತಿರ ಪ್ರದೇಶದಲ್ಲಿಯೆ ಕೊಳೆಯುತ್ತಿರುವದರಿಂದ ನೊಣಗಳು ಉತ್ಪತ್ತಿಯಾಗಲು ಕಾರಣವಾಗಿದೆ ಎಂದು ಸ್ಥಳಿಯರು ದೂರುತ್ತಿದ್ದಾರೆ.
ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಹೊಸಕೆರೆ, ಜುಮ್ಮನಗದ್ದೆ ಭಾಗಗಳಲ್ಲಿ ನೊಣದ ಕಾಟ ವಿಪರೀತವಾದ ಪರಿಣಾಮ ಮನೆಮಂದಿ ಓಡಾಡುತ್ತ ಊಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ. ಒಂದೆಡೆಯಲ್ಲಿ ಮನೆಮಂದಿ ಊಟಕ್ಕೆ ಕುಳಿತರೆ ನೊಣಗಳು ಊಟದ ತಾಟಿನ ಮೇಲೆ ಕುಳಿತುಕೊಂಡು ಅಸಹ್ಯ ಭಾವನೆ ಉಂಟು ಮಾಡುತ್ತಿದೆ. ಗಾಳಿ ಬೀಸುತ್ತಾ ನೊಣಗಳು ಹತ್ತಿರ ಬರದಂತೆ ನೋಡಿಕೊಂಡು ಅಡುಗೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆಯಂತೆ.
ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ವೇಳೆಗೆ ಸ್ವಚ್ಛ ಹಾಗೂ ಶುದ್ಧ ಆಹಾರ ಸೇವಿಸುತ್ತಿದ್ದೇವೆ. ಆದರೆ, ಮನೆಗೆ ತೆರಳಿದಾಗ ಮಾತ್ರ ನೊಣ ಕುಳಿತ ತಟ್ಟೆಯಲ್ಲಿ ಊಟ ಮಾಡಲೂ ಸಹ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸಕೆರೆ ಗ್ರಾಮವೊಂದರಲ್ಲೆ ಹದಿನೈದಕ್ಕೂ ಹೆಚ್ಚು ಸಹಪಾಠಿಗಳಿದ್ದಾರೆ. ಅವರೆಲ್ಲರೂ ಸಹ ಮನೆಗಳಲ್ಲಿ ನೊಣ ಕುಳಿತ ಅನ್ನದ ತಟ್ಟೆಯಲ್ಲಿಯೆ ಊಟ ಮಾಡುತ್ತಿರುವುದು ಬೇಸರ ತಂದಿದೆ ಎನ್ನುತ್ತಾರೆ ಇಲ್ಲಿಯ ಜನರು.
ಇಲ್ಲಿಯ ಪರಿಸ್ಥಿತಿ ಸರಿಪಡಿಸುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಲಿ ಎಂಬುದೇ ನಮ್ಮ ಆಶಯ.