ಕೊಂಕಣದಲ್ಲಿ ವನಮಹೋತ್ಸವ
ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್, ರೋಟರಿ ಕ್ಲಬ್ ಕುಮಟಾ ಹಾಗೂ ಇಂಟರ್ಯಾಕ್ಟ್ ಕ್ಲಬ್ ಸಿ.ವಿ.ಎಸ್.ಕೆ ಪ್ರೌಢಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಮಟಾ ಅರಣ್ಯ ಇಲಾಖೆಯ ಏ.ಸಿ.ಎಫ್ ಪ್ರವೀಣಕುಮಾರ ಬಸ್ರೂರ್ ಅವರು ಜಾಗತಿಕ ತಾಪಮಾನದ ಏರಿಕೆಯ ಕುರಿತು ಮಾತನಾಡಿ, ಗಿಡ-ಮರಗಳ ಮಹತ್ವ ವಿವರಿಸಿದರು. ಪ್ರಕೃತಿ ಮಾನವನ ಆಸೆಯನ್ನು ಪೂರೈಸುತ್ತದೆಯಲ್ಲದೇ ಅವರ ದುರಾಸೆಗಳನ್ನಲ್ಲ ಎನ್ನುವುದನ್ನು ವಿದ್ಯಾರ್ಥಿಗಳಿಂದ ಪ್ರಹಸನ ಮಾಡಿಸಿ ಮನಮುಟ್ಟುವಂತೆ ವಿವರಿಸಿದರು. ನಂತರ, ರೋಟರಿ ಅಸಿಸ್ಟಂಟ್ ಗವರ್ನರ್ ವಿನಾಯಕ ಬಾಳೇರಿ ಮಾತನಾಡಿ, ಶಾಲಾ ಇಂಟರ್ಯಾಕ್ಟ್ ಕ್ಲಬ್ ಇದರ ಧ್ಯೇಯೋದ್ದೇಶಗಳನ್ನು ವಿವರಿಸಿದರು.
ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಕಾರ್ಯದರ್ಶಿಗಳಾದ ಮುರಲೀಧರ ಪ್ರಭು ಮಾತನಾಡಿ, ನಮ್ಮ ಸಂಸ್ಥೆಯ ಹಾಗೂ ರೋಟರಿ ಸಂಸ್ಥೆಯ ಸಂಬಂಧ ಕುರಿತು ವಿವರಿಸಿದರು. ರೋಟರಿ ಅಧ್ಯಕ್ಷರಾದ ಕಿರಣ ಕುವಾಳ್‍ಕರ್ ಮಾತನಾಡಿ, ಕುಮಟಾವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕರೆ ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ರೊಟೇರಿಯನ್ ಸತೀಶ ನಾಯ್ಕ ಪ್ರಕೃತಿಯ ಮಹತ್ವದ ಕುರಿತು ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷರಾದ ವಿ.ಆರ್.ನಾಯಕ, ರೊಟೇರಿಯನ್‍ರಾದ ಮೊಹಮ್ಮದ ಅಕ್ಬರ್ ಮುಲ್ಲಾ, ಜಿನರಾಜ, ಪ್ರಾಚಾರ್ಯೆ ಸುಲೋಚನಾ ರಾವ್, ಮುಖ್ಯಾಧ್ಯಾಪಕಿ ಸುಮಾ ಪ್ರಭು, ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್.ದೇಶಭಂಡಾರಿ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಶಾಲೆಯ ಇಂಟರ್ಯಾಕ್ಟ್ ಕ್ಲಬ್‍ನ್ನು ಉದ್ಘಾಟಿಸಲಾಯಿತು. ಕ್ಲಬ್‍ನ ಮಾರ್ಗದರ್ಶಕ ಶಿಕ್ಷಕರಾದ ಪ್ರಕಾಶ ಗಾವಡಿ ಶಾಲಾ ಇಂಟರ್ಯಾಕ್ಟ್ ಕ್ಲಬ್ ಕುರಿತು ವಿವರಿಸಿದರು. ಶಿಕ್ಷಕಿ ಅನಿತಾ ಹಾಗೂ ಸುನಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಸುಮಾ ಪ್ರಭು ಸ್ವಾಗತಿಸಿದರು. ವಿದ್ಯಾರ್ಥಿನಿ ಸುದಿತಿ ಕಾಮತ ಧನ್ಯವಾದ ಸಮರ್ಪಿಸಿದರೆ, ತೇಜಸ್ವಿನಿ ಶಾನಭಾಗ ಸಂಗಡಿಗರು ಪ್ರಾರ್ಥಿಸಿದರು.