ಬೆಂಗಳೂರು : ಯಾವ ಇಚ್ಛೆಗೆ ಬಲವಾದ ದಾಢ್ಯ ಇರುವುದೋ ಅದಕ್ಕೆ ಸಂಕಲ್ಪ ಎಂದು ಹೆಸರು. ಇಚ್ಛೆ ಸಂಕಲ್ಪವಾದಾಗ ಕಾರ್ಯ ಸಾಧ್ಯವಾಗುತ್ತದೆ. ಯಾವ ಇಚ್ಛೆ ದೃಢವಾದ್ದು, ಯಾವ ಇಚ್ಛೆ ಜೊಳ್ಳು ಎಂದು ಭಗವಂತನೂ ನೋಡುತ್ತಾನೆ. ಇಚ್ಚೆ ಬಲವಾಗಿದ್ದಾಗ ದೇವರೂ ಅದಕ್ಕೆ ತಥಾಸ್ತು ಎಂದು ಹೇಳುತ್ತಾನೆ ಎಂದು ಶ್ರೀರಾಮಚಂದ್ರಾಪುರಮಠದ ರಾಘವೇಶ್ವರಭಾರತೀ ಶ್ರೀಗಳು ಹೇಳಿದರು.

ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠವಾದ ಗಿರಿನಗರದ ಶ್ರೀರಾಮಾಶ್ರಮದಲ್ಲಿ “ಗೋಸ್ವರ್ಗ ಚಾತುರ್ಮಾಸ್ಯ”ದ ಧರ್ಮ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಪೂಜ್ಯ ಶ್ರೀಗಳು, ನಾವು ಸಂನ್ಯಾಸ ಸ್ವೀಕರಿಸಿದ್ದ ಸ್ಥಳದಲ್ಲೇ ಇಪ್ಪತ್ತೈದನೇ ಚಾತುರ್ಮಾಸ್ಯ ವ್ರತ ಸ್ವೀಕಾರ ಮಾಡುತ್ತಿರುವುದು ಸಂತಸದ ವಿಚಾರ. ಭಾರತೀಯ ಪರಂಪರೆಯಲ್ಲಿ ಇಪ್ಪತ್ತೈದು – ಐವತ್ತು ವರ್ಷಳಿಗೆ ಮಹತ್ವವಿಲ್ಲ, ಬದಲಾಗಿ 48 ವರ್ಷಕ್ಕೆ ಪೂರ್ಣ ಮಂಡಲ – 24 ವರ್ಷಕ್ಕೆ ಅರ್ಧಮಂಡಲವಾಗಿ ಆಚರಿಸುತ್ತಾರೆ. 24ವರ್ಷಗಳ ಅರ್ಧಮಂಡಲವನ್ನು ಪೂರೈಸಿ, ಉತ್ತರಾರ್ಧವನ್ನು ಇಲ್ಲಿಂದಲೇ ಆರಂಭಿಸುವಂತೆ ಆಗಿರುವುದು ದೈವೀ ಸಂಕಲ್ಪ ಎಂದು ಅಭಿಪ್ರಾಯಪಟ್ಟರು.

ಗೋಸ್ವರ್ಗ ಗೋವುಗಳಿಗೆ ಸಮರ್ಪಿತವಾದಂತೆ, ಈ ಚಾತುರ್ಮಾಸ್ಯ ಗೋಸ್ವರ್ಗಕ್ಕೆ ಸಮರ್ಪಿತ. ಎರಡು ತಿಂಗಳುಗಳ ಕಾಲ ಬೆಂಗಳೂರಿನಲ್ಲಿ ಇದ್ದಕೊಂಡು ಗೋಸ್ವರ್ಗಕ್ಕೆ ಚೈತನ್ಯ ತುಂಬುವ ಕೆಲಸವಾಗಲಿದೆ. ಗೋಸ್ವರ್ಗವನ್ನು ಸರ್ವಸುಸಜ್ಜಿತವಾಗಿಸಿ ಜಗತ್ತಿಗೆ ಮಾದರಿಯಾಗಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಪುನರ್ವಸು ಕಟ್ಟಡಕ್ಕೂ ನಮಗೂ ಆತ್ಮಬಂಧವಿದೆ: ದೊಡ್ಡ ಗುರುಗಳು ನಮ್ಮನ್ನು ವಿವಿಧ ರೀತಿಯಲ್ಲಿ ಪರೀಕ್ಷಿಸಿ, ಉತ್ತರಾಧಿಕಾರಿಯಾಗಿ ಘೋಷಿಸಿದ್ದು ಇದೇ ಪುನರ್ವಸು ಕಟ್ಟಡದ ಜಾಗದಲ್ಲಾಗಿದೆ. ಸಂನ್ಯಾಸ ಸ್ವೀಕಾರ, ಮಹಾವಾಕ್ಯೋಪದೇಶ, ದೊಡ್ದ ಗುರುಗಳ ಮಾರ್ಗದರ್ಶನ ಎಲ್ಲವೂ ಇದೇ ಜಾಗದಲ್ಲಾಗಿದ್ದು, ಈ ಜಾಗಕ್ಕೂ ನಮಗೂ ಆತ್ಮಬಂಧವಿದೆ. ದೊಡ್ದಗುರುಗಳು ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಹೆಚ್ಚಿನ ಸಮಯ ಇದೇ ಜಾಗದಲ್ಲಿ ವಸತಿ ಮಾಡಿದ್ದರು. ಈ ಜಾಗದಲ್ಲಿ ಇಂದು 25ನೇ ಚಾತುರ್ಮಾಸ್ಯ ವ್ರತಸ್ವೀಕಾರ ಮಾಡಿರುವುದು ಸಂತಸಮೂಡಿಸಿದೆ ಎಂದರು.

RELATED ARTICLES  ಬಿ ಎಸ್ ವೈ ಗೆ ಸಿಕ್ಕಿತು ಸ್ವಲ್ಪ ರಿಲೀಫ್!

ವಿದ್ವಾನ್ ಸೂರ್ಯನಾರಾಯಣ ಹಿತ್ಲಳ್ಳಿಯವರು ಮಾತನಾಡಿ, ಬ್ರಾಹ್ಮಣರು ವೇದದ ಜೊತೆ ಗೋವುಗಳನ್ನು ಸಂರಕ್ಷಿಸಿಕೊಂಡು ಬಂದವರಾಗಿದ್ದು, ಇತ್ತೀಚೆಗೆ ವೇದಗಳ ಜೊತೆ ಗೋವುಗಳನ್ನು ಮರೆಯುತ್ತಿದ್ದೇವೆ. ಆದರೆ ಪೂಜ್ಯ ರಾಘವೇಶ್ವರ ಶ್ರೀಗಳು ಗೋವುಗಳ ಸಂರಕ್ಷಣೆಯನ್ನು ನೆನಪಿಸುವ ಕಾರ್ಯಮಾಡುತ್ತಿದ್ದಾರೆ. ಗುರುವನ್ನು ಚಂದನಕ್ಕೆ ಹೋಲಿಸಬಹುದಾಗಿದ್ದು, ಚಂದನ ಸುಗಂಧವನ್ನೇ ಹೊರಸೂಸುವಂತೆ ಗುರುಗಳು ಜ್ಞಾನವನ್ನು, ಉತ್ತಮ ವಿಚಾರಗಳನ್ನು ಸಮಾಜಕ್ಕೆ ನೀಡುತ್ತಾರೆ ಎಂದರು.

ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ ಮಾತನಾಡಿ, ಶ್ರೀಗಳು ಗೋಸ್ವರ್ಗವನ್ನು ಮಾತ್ರ ನಿರ್ಮಿಸಿಲ್ಲ, ಗೋವಿನಲ್ಲೇ ಸ್ವರ್ಗವಿದೆ ಎಂಬ ಸತ್ಯವನ್ನು ಜಗತ್ತಿಗೆ ತಿಳಿಸುತ್ತಿದ್ದಾರೆ. ‘ಸ್ವರ್ಗಕ್ಕೆ ಮೂರೇ ಗೇಣು’ ಎಂಬ ಮಾತು ಇದ್ದು, ಇಲ್ಲಿ ಮೂರು ಗೇಣುಗಳ ಕೊರತೆ ಸದಾ ಇರುತ್ತದೆ. ಆದರೆ ಗೋಸ್ವರ್ಗದ ಮೂಲಕ ಆ ಕೊರತೆಯನ್ನು ನೀಗಿಸಿ, ಗೋಸ್ವರ್ಗವನ್ನು ಭುವಿಗಿಳಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕ ಮಾತನಾಡಿದ ವಿದ್ವಾನ್ ಜಗದೀಶ ಶರ್ಮರು, ಪ್ರತಿ ಚಾತುರ್ಮಾಸ್ಯಕ್ಕೆ ಒಂದು ಉದ್ದೇಶವನ್ನು ಇಟ್ಟುಕೊಂಡು, ಸಮಗ್ರ ಸಮಾಜವನ್ನು ತೊಡಗಿಸಿಕೊಳ್ಳುವಂತೆ ಮಾಡಿ; ಚಾತುರ್ಮಾಸ್ಯಕ್ಕೆ ವಿಶಿಷ್ಟ ರೂಪ ನೀಡಿದವರು ಶ್ರೀಗಳು. ವಿಶಿಷ್ಟ ಕಲ್ಪನೆಯ ಗೋಧಾಮ “ಗೋಸ್ವರ್ಗ” ವನ್ನು ಸಮಾಜಕ್ಕೆ ಪರಿಚಯಿಸಲು ಈ ಚಾತುರ್ಮಾಸ್ಯ ನಡೆಯಲಿದೆ. ಭಾನ್ಕುಳಿಯಲ್ಲಿರು ವಿಶ್ವದ ಏಕೈಕ ಗೋಸ್ವರ್ಗವನ್ನು ಅಂತಾರಾಷ್ಟ್ರೀಯ ಮಟ್ಟದ ಕೇಂದ್ರವಾಗಿಸಬೇಕಿದೆ ಎಂದರು.

RELATED ARTICLES  ಕೋವಿಡ್ ಲಸಿಕೆ ಪಡೆದಿದ್ದ ವ್ಯಕ್ತಿ ಒಂದು ಗಂಟೆಯಲ್ಲಿ ಹೃದಯಾಘಾತದಿಂದ ಸಾವು

ಇದಕ್ಕೂ ಮೊದಲು ಬೆಳಗ್ಗೆ, ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ತಮ್ಮ 25ನೇ ಚಾತುರ್ಮಾಸ್ಯವ್ರತವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ವ್ಯಾಸಪೂಜೆಯನ್ನು ಕೈಗೊಳ್ಳುವಮೂಲಕ ವಿಧ್ಯುಕ್ತವಾಗಿ ಆರಂಭಿಸಿದರು. ಶ್ರೀರಾಮಾದಿ ದೇವರ ಪೂಜೆಯನ್ನು ಮಾಡಿ, ನಿಂಬೆಯಹಣ್ಣಿನಲ್ಲಿ ಕೃಷ್ಣಾದಿ ದೇವತೆಗಳು ಹಾಗೂ ವ್ಯಾಸಾದಿ ಋಷಿಗಳನ್ನು ಆವಾಹನೆಮಾಡಿ, ಶಾಂಕರ ಪರಂಪರೆಯ ಮಠೀಯ ಪದ್ಧತಿಯಂತೆ ಪೂಜಿಸುವುದರ ಮೂಲಕ ವ್ಯಾಸಪೂಜೆ ಸಂಪನ್ನವಾಯಿತು. ಶ್ರೀ ಮುಗಳಿ ತಿರುಮಲೇಶ್ವರ ಭಟ್ ಅವರು ಸರ್ವಸೇವೆ ಸಮರ್ಪಿಸಿದರೆ, ಚಾತುರ್ಮಾಸ್ಯಸಮಿತಿಯ ಪರವಾಗಿ ಅಧ್ಯಕ್ಷರಾದ ರಮೇಶ್ ಕೋರಮಂಗಲ ಫಲಸಮರ್ಪಿಸಿ, ಸಭಾಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಗೋಸ್ವರ್ಗದ ಮೊದಲ ಉತ್ಪನ್ನ “ಸ್ವರ್ಗಸಾರ” ಬೇವು ಮಿಶ್ರಿತ ಎರೆಗೊಬ್ಬರ ಲೋಕಾರ್ಪಣೆಯಾಯಿತು.

ಕಾರ್ಯಕ್ರಮದಲ್ಲಿ ಶ್ರೀಮಠದ ಸಮ್ಮುಖ ಸರ್ವಾಧಿಕಾರಿಗಳಾದ ಶ್ರೀ ತಿಮ್ಮಪ್ಪಯ್ಯ ಮಡಿಯಾಲ್, ಮುಖ್ಯ ನಿರ್ವಹಣಾಧಿಕಾರಿಗಳಾದ ಕೆ ಜಿ ಭಟ್, ಚಲನಚಿತ್ರ ನಿರ್ಮಾಪಕ ಸಾ ರಾ ಗೋವಿಂದು, ಚಾತುರ್ಮಾಸ್ಯ ನಿರ್ವಹಣಾ ಸಮಿತಿಯ ದಿಗ್ದರ್ಶಕರಾದ ಯು ಎಸ್ ಜಿ ಭಟ್, ರಾಮಚಂದ್ರಭಟ್ ಕೆಕ್ಕಾರು, ಅಧ್ಯಕ್ಷರಾದ ರಮೇಶ್ ಕೊರಮಂಗಲ, ಪ್ರಧಾನ ಕಾರ್ಯದರ್ಶಿ ವಾದಿರಾಜ ಸಾಮಗ, ಮಹಾಮಂಡಲದ ಅಧ್ಯಕ್ಷರಾದ ಈಶ್ವರೀ ಬೇರ್ಕಡವು, ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಪ್ಪು, ಸೇರಿದಂತೆ ಶ್ರೀಸಂಸ್ಥಾನದ ಕಾರ್ಯದರ್ಶಿ – ಸಹಕಾರ್ಯದರ್ಶಿಗಳು, ಎಲ್ಲಾ ಸಮಿತಿಯ ಪದಾಧಿಕಾರಿಗಳು, ಎಲ್ಲಾ ಮಂಡಲಗಳ ಪದಾಧಿಕಾರಿಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ವ್ಯಾಸಮಂತ್ರಾಕ್ಷತೆ ಸ್ವೀಕರಿಸಿದರು.