ಚೆನ್ನೈ : ಅದು ದ್ರಾವಿಡ ಚಳವಳಿಯ ಹುಟ್ಟಾ, ಅಥವಾ ತಮಿಳು ನಾಡಿನ ಇತಿಹಾಸದಲ್ಲಿ ಹೊಸ ಅಧ್ಯಾಯದ ಮುನ್ನುಡಿಯಾ ಗೊತ್ತಿಲ್ಲ. ತೆಲುಗು ಭಾಷೆಯನ್ನಾಡುವ ಕುಟುಂಬದಲ್ಲಿ ತಮಿಳುನಾಡಿನ ತಿರುಕ್ಕುವಲ್ಲೈ ಎಂಬ ಗ್ರಾಮದಲ್ಲಿ ಆ ಮಗು ಜನಿಸಿತ್ತು. ತಾಯಿ ಅಂಜು, ತಂದೆ ಮುತ್ತುವೇಲು. ಅಪ್ಪ – ಅಮ್ಮ ಇಟ್ಟ ಹೆಸರು ದಕ್ಷಿಣಮೂರ್ತಿ. ಹೆಸರಿಗೆ ತಕ್ಕಂತೆಯೇ ಆತ ದಕ್ಷಿಣದ ಮೂರ್ತಿಯಾದ. ಆತ ಯಾರೂ ಅಲ್ಲ ತಮಿಳುನಾಡಿನ ರಾಜಕೀಯದ ಮುತ್ಸದ್ದಿ, ಐದು ಬಾರಿ ಮುಖ್ಯಮಂತ್ರಿಯಾಗಿ ಮೆರೆದರು ಕರುಣಾನಿಧಿ. ಅವೆಲ್ಲಕ್ಕಿಂತಲೂ ಮಿಗಿಲಾಗಿ ದ್ರಾವಿಡ ಚಳವಳಿಯಲ್ಲಿ ಕರುಣಾನಿಧಿ ತಳೆದ ಪಾತ್ರ ಬಹುದೊಡ್ಡದು. 1924ರ ಜೂನ್ 3 ರಂದು ಜನಿಸಿದ ಕರುಣಾನಿಧಿ ಇಂದು ಅನಾರೋಗ್ಯದಿಂದ ವಯೋಸಹಜ ಸಾವನ್ನಪ್ಪಿದ್ದಾರೆ. ಈ ಮೂಲಕ ದ್ರಾವಿಡ ಚಳವಳಿಯ ಕಡೆಯ ಕೊಂಡಿ ಕಳಚಿದೆ.
ಬಾಲ್ಯದಲ್ಲಿ ಕರುಣಾನಿಧಿಯವರ ಆಸಕ್ತಿ ಕೇವಲ ಸಾಹಿತ್ಯ, ಕವಿತೆ, ನಾಟಕದಲ್ಲಿ ಮಾತ್ರವಿತ್ತು. ಅಳಗಿರಿಸಾಮಿಯವರ ಮೇಲೆ ಅಪಾರ ಗೌರವ ಹೊಂದಿದ್ದ ಕರುಣಾನಿಧಿಯವರ ಮೇಲೆ ಅವರ ಪ್ರಭಾವ ಗಾಢವಾಗಿ ಬೀರಿತ್ತು. 14 ವರ್ಷದವನಾಗಿದ್ದಾಗಲೇ ಸಾಮಾಜಿಕ ಕಾರ್ಯಕರ್ತನಾದ ಹೆಗ್ಗಳಿಕೆ ಕರುಣಾನಿಧಿಯವರದ್ದು. ಅವರ ಹಾದಿಯಲ್ಲೇ ಇದ್ದ ಕೆಲ ಯುವಕರ ಜತೆ ಸೇರಿ ಸಣ್ಣಮಟ್ಟದ ತಂಡವನ್ನೂ ಆ ಚಿಕ್ಕ ವಯಸ್ಸಿನಲ್ಲೇ ಕಟ್ಟಿದರು. ಅದಾದ ಕೆಲವೇ ದಿನಗಳಲ್ಲಿ ಆಲ್ ಸ್ಟುಡೆಂಟ್ಸ್ ಕ್ಲಬ್ ಎಂಬ ದೊಡ್ಡ ಗುಂಪೊಂದು ಆರಂಭವಾಗಿತ್ತು. ಅದು ದ್ರಾವಿಡ ಚಳವಳಿಯ ವಿದ್ಯಾರ್ಥಿ ವಿಭಾಗವಾಗಿತ್ತು.
ಅದರ ಜತೆಗೆ ಕ್ಲಬ್ಬಿನ ಸದಸ್ಯರಿಗಾಗಿ ಕರುಣಾನಿದಿ ಪತ್ರಿಕೆಯೊಂದನ್ನು ಆರಂಭಿಸಿದರು. ದ್ರಾವಿಡ ಮುನ್ನೇತ್ರ ಕರಗಂ ಪಕ್ಷದ ಸ್ಥಾಪನೆ ಮಾಡಿದರು. ಜತೆಗೆ ಎಲ್ಲಾ ಸದಸ್ಯರನ್ನೂ ಸಾಮಾಜಿಕ ಅಭಿವೃದ್ಧಿ ಕೆಲಸಗಳಿಗೆ ಪ್ರೇರೇಪಿಸಿದರು. ಪಕ್ಷದ ಪತ್ರಿಕೆಯಾಗಿ ಮುರ್ಸೋಲಿ ಎಂಬ ಹೆಸರಿನ ಪತ್ರಿಕೆಯನ್ನು ಆರಂಭಿಸಿದರು. ಕರುಣಾನಿಧಿಯವರಿಗೆ ಮೊದಲು ಎದುರಾದ ಸಮಸ್ಯೆಯೆಂದರೆ ಡೆಲ್ಮಿಯಾ. ಇಂದಿಗೂ ದೇಶದೆಲ್ಲೆಡೆ ಡೆಲ್ಮಿಯಾ ಸಿಮೆಂಟ್ ಮೊದಲ ಸ್ಥಾನದಲ್ಲಿದೆ. ಕಲ್ಲಗುಡಿ ಎಂಬ ಗ್ರಾಮದಲ್ಲಿ ಡೆಲ್ಮಿಯಾ ಸಿಮೆಂಟ್ ಉತ್ಪಾದನಾ ಘಟಕವಿತ್ತು. ಊರಿನ ಹೆಸರನ್ನೇ ಬದಲಿಸಿ, ಡೆಲ್ಮಿಯಾಪುರಂ ಎಂಬ ಹೆಸರಲ್ಲಿ ಆ ಗ್ರಾಮಕ್ಕೆ ಮರುನಾಮಕರಣ ಮಾಡಿದ್ದರು.
ಅದು ಕರುಣಾನಿಧಿಯವರನ್ನು ತೀವ್ರವಾಗಿ ಕಾಡಿತ್ತು, ಜತೆಗೆ ಉತ್ತರ ಭಾರತೀಯರ ಹೇರಿಕೆಯ ಅನುಭವವನ್ನು ಕೊಟ್ಟಿತ್ತು. ರೈಲ್ವೇ ನಿಲ್ದಾಣದಲ್ಲೂ ಡೆಲ್ಮಿಯಾಪುರಂ ಎಂಬ ಬೋರ್ಡ್ ನೋಡಿದ ನಂತರ ರೈಲು ಸಂಚಾರಕ್ಕೆ ತಡೆ ಒಡ್ಡಿದರು. ತಮಿಳು ಅಸ್ಮಿತೆಗಾಗಿ ಕರುಣಾನಿಧಿ ಚಿಕ್ಕ ವಯಸ್ಸಿನಲ್ಲೇ ಶ್ರಮಿಸಿದರು. ದ್ರಾವಿಡನ್ನರ ಉಳಿವಿಕೆಗಾಗಿ ಶ್ರಮಿಸಿದ ಮಹಾ ನಾಯಕರ ಪಟ್ಟಿಯಲ್ಲಿ ಕರುಣಾನಿಧಿಯವರ ಹೆಸರು ಬಹು ದೊಡ್ಡದು. ದಕ್ಷಿಣ ಭಾರತದ ರಾಜ್ಯಗಳಿಗೆ ಅವರು ನೀಡಿದ ಕೊಡುಗೆ ಅಪಾರ.
ಕರುಣಾನಿಧಿ ಕೆಲಸವನ್ನು ಆರಂಭಿಸಿದ್ದು ತಮಿಳು ಸಿನೆಮಾಗಳ ಕಥೆಗಾರನಾಗಿ. ಅವರ ಪ್ರತಿ ಬರವಣಿಗೆಯಲ್ಲೂ ದ್ರಾವಿಡ ಚಳವಳಿಯ ಸೊಗಡಿತ್ತು. 1952ರಲ್ಲಿ ‘ಪರಾಸಕ್ತಿ’ ಎಂಬ ಸಿನೆಮಾ ಮಾಡಿ ಕರುಣಾನಿಧಿ ದ್ರಾವಿಡ ಚಳವಳಿಯನ್ನು ಇನ್ನಷ್ಟು ಮುಂದೆ ಕೊಂಡೊಯ್ದರು. ಅದರ ಜತೆಗೆ ತಮಿಳು ಸಿನೆಮಾ ರಂಗ ಎಂದಿಗೂ ಮರೆಯಲಾಗದ ಎರಡು ಅದ್ಭುತ ಪ್ರತಿಭೆಗಳನ್ನೂ ಕರುಣಾನಿದಿ ನೀಡಿದರು. ಒಂದು ಶಿವಾಜಿ ಗಣೇಶನ್ ಮತ್ತೊಬ್ಬರು ಎಸ್ಎಸ್ ರಾಜೇಂದ್ರನ್. ಇಂದಿಗೂ ತಮಿಳು ಸಿನೆಮಾ ರಂಗದಲ್ಲಿ ಈ ಹೆಸರುಗಳು ಅಜರಾಮರ.
1950ರಲ್ಲೇ ಈ ಸಿನೆಮಾ ಸಿದ್ಧವಾಗಿತ್ತು, ಆದರೆ ಅದನ್ನು ಬಿಡುಗಡೆ ಮಾಡದಂತೆ ನಿರ್ಬಂಧ ಹೇರಲಾಗಿತ್ತು. ಆದರೆ ಅಂತೂ ಇಂತೂ ಕರುಣಾನಿಧಿಯವರ ಹೋರಾಟದಿಂದ 1952ರಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಇಡೀ ರಾಜ್ಯ ಚಿತ್ರದಿಂದ ತಲ್ಲಣಗೊಂಡಿತ್ತು. ಹಿಂದೂ ಮೂಲಭೂತವಾದಿಗಳು ಚಿತ್ರವನ್ನು ವಿರೋಧಿಸಿದ್ದರು. ಪನಮ್ ಮತ್ತು ತಂಗರ್ತನಮ್ ಎಂಬ ಚಿತ್ರಕತೆಗೂ ಕರುಣಾನಿಧಿ ವಿರೋಧವನ್ನು ರಾಜ್ಯಾದ್ಯಂತ ಕಂಡಿದ್ದರು. ಸಮಾಜವಾದ, ಸಮಾನತೆಗಾಗಿ ಹೋರಾಟಗಳನ್ನು ಮಾಡಿದ್ದ ಕರುಣಾನಿಧಿ ಲೇಖನಿಯಿಂದ ವಿಡಂಬನೆಗಳೇ ಹೊಮ್ಮುತ್ತಿತ್ತು.
ಬ್ರಾಹ್ಮಣ್ಯ, ಪುರೋಹಿತಶಾಹಿ, ಮೂಲಭೂತವಾದಿಗಳ ಕೆಂಗಣ್ಣಿಗೆ ಅವರ ಪ್ರತಿ ಬರವಣಿಗೆಗಳೂ ಗುರಿಯಾಗುತ್ತಿದ್ದವು. ಆದರೆ ಅದ್ಯಾವುದಕ್ಕೂ ಕರುಣಾನಿಧಿ ಅಂಜಲಿಲ್ಲ. ಅವರ ಬರವಣಿಗೆಯನ್ನು ದ್ವೇಷಿಸಿದವರನ್ನು ಮೀರಿ ಅಭಿಮಾನಿಗಳು ಹುಟ್ಟಿದರು. ಇವತ್ತಿನ ಚೆನ್ನೈ, ಅಂದಿನ ಮದ್ರಾಸಿಗಿಂತ 350 ಕಿಮೀ ದೂರದ ಸೇಲಂನಲ್ಲಿ ಅವರು ನೆಲೆಸಿದರು. ಬಂಡಾಯ ಬರಹಗಾರರಾಗಿ ಗುರುತಿಸಿಕೊಂಡರು. ತಮಿಳು ನವ್ಯ ಸಾಹಿತ್ಯದ ಹರಿಕಾರರಾದರು. ಒಟ್ಟೂ 39 ಚಲನಚಿತ್ರಗಳು ಅವರು ಬರೆದ ಕಥೆಯನ್ನಾಧರಿಸಿದೆ. ಅವರು ಬರೆಯುತ್ತಿದ್ದ ಚಿತ್ರಕಥೆಗಳ ಕಥಾ ಹಂದರ ವಿಧವಾ ವಿವಾಹ, ಸತಿಸಹಗಮನ ಪದ್ಧತಿಯ ವಿರೋಧ, ಮಹಿಳಾ ಸಮಾನತೆ, ಮೇಲು ಕೀಳು ಭಾವನೆಗಳನ್ನು ಕಿತ್ತು ಹಾಕುವ ವಿಚಾರಧಾರೆಗಳನ್ನು ಹೊಂದಿದ್ದವು.
ರಾಜಕೀಯಕ್ಕೆ ಬರುವ ಮುನ್ನ ಕರುಣಾನಿದಿ ಕೈ ಬರಹದಿಂದ ಮನಾವರ ನೇಸನ್, ತಮಿಳ್ ಮನಾವರ್ ಮಂದ್ರಂ ಎಂಬೆಲ್ಲಾ ಸಾಹಸಕ್ಕೆ ಕೈಹಾಕಿದ್ದರು. ಅವೆಲ್ಲವೂ ಕೂಡ ದ್ರಾವಿಡ ಚಳವಳಿಯನ್ನು ಜಾಗೃತವಾಗಿಡುವ ಭಾಗವಾಗಿಯೇ ಇದ್ದವು. 33 ವರ್ಷ ವಯಸ್ಸಿನಲ್ಲಿ ಕರುಣಾನಿದಿ ಮೊದಲ ಬಾರಿಗೆ 1957ರಲ್ಲಿ ಕುಳಿತಲೈ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ದಿಸಿದರು. ದ್ರಾವಿಡ ಮುನ್ನೇತ್ರ ಕರಗಂ ಪಕ್ಷದ ಖಜಾಂಚಿಯಾಗಿ 1961ರಲ್ಲಿ ಆಯ್ಕೆಯಾದರು. 1967ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಾಗ ಲೋಕೋಪಯೋಗಿ ಸಚಿವರಾದರು. 1969ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಅಣ್ಣಾದೊರೈ ನಿಧನರಾದಾಗ ಕರುಣಾನಿದಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ಅದಾದ ನಂತರ ತಮಿಳು ನಾಡಿನ ಶ್ರೇಷ್ಟ ಕಲಾವಿದ ಮತ್ತು ರಾಜಕಾರಣಿ ಎಂಜಿ ರಾಮಚಂದ್ರನ್ರ ಅಣ್ಣಾ ದ್ರಾವಿಡ ಮುನ್ನೇತ್ರ ಕರಗಂ ಮುಂದೆ ಕರುಣಾನಿಧಿ ಹಲವು ಬಾರಿ ಸೋಲನುಭವಿಸಿದರು. ಅದಾದ ನಂತರ 1989ರಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 1987ರಲ್ಲಿ ಎಂಜಿ ರಾಮಚಂದ್ರನ್ ಮೃತಪಟ್ಟಿದ್ದರು. ಅದಾದ ಕೆಲ ದಿನಗಳಲ್ಲೇ ರಾಷ್ಟ್ರಪತಿ ಆಳ್ವಿಕೆ ತಮಿಳುನಾಡಿನಲ್ಲಿ ಹೇರಲಾಗಿತ್ತು.
ಅದಾದ ನಂತರ 2 ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಮುಖ್ಯಮಂತ್ರಿಯಾಗಿ 1989ರಲ್ಲಿ ಅಧಿಕಾರ ಸ್ವೀಕರಿಸಿದರು. ಆದರೆ ಬಿಜೆಪಿಯ ಮುಖಂಡ ಸುಬ್ರಮಣಿಯನ್ ಸ್ವಾಮಿಯವರು ಚಂದ್ರಶೇಖರ್ ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕರುಣಾನಿಧಿ ವಿರುದ್ಧ ದೂರು ನೀಡಿದರು. ಶ್ರೀಲಂಕಾದಲ್ಲಿ ತಮಿಳರ ಹಕ್ಕಿಗಾಗಿ ಪ್ರಭಾಕರನ್ ಆರಂಭಿಸಿದ್ದ ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಮ್ (ಎಲ್ಟಿಟಿಯಿ)ಗೆ ನೇರವಾಗಿ ಸಹಕಾರ ನೀಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಕರುಣಾನಿಧಿ ಸರ್ಕಾರವನ್ನು ವಜಾಗೊಳಿಸಲಾಯಿತು.
ನಂತರ ನಡೆದ ಚುನಾವಣೆಯಲ್ಲಿ ಕರುಣಾನಿಧಿ ಸೋಲು ಕಂಡರು. ಅದಾದ ನಂತರ 1996ರಲ್ಲಿ ಮೊದಲ ಬಾರಿಗೆ ಪೂರ್ಣಾವಧಿಗೆ ಅಧಿಕಾರಕ್ಕೆ ಬಂದರು. 1996ರಿಂದ 2001ರವರೆಗೂ ಪೂರ್ಣಾವಧಿ ಅಧಿಕಾರ ನಡೆಸಿದರು. ಎಂಜಿಆರ್ ಉತ್ತರಾಧಿಕಾರಿ ಜಯಲಲಿತಾ ಅವರ ಮುಂದೆ ತಲೆ ಬಾಗುವ ಸ್ಥಿತಿ ಬಂದೊದಗಿತ್ತು. 2001ರ ಚುನಾವಣೆಯಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕರಗಂ ಪಕ್ಷದ ಮುಂದಾಳತ್ವವನ್ನು ಒಂದು ಕಾಲದ ತಮಿಳು ಸಿನೆಮಾ ತಾರೆ ಜಯಲಲಿತಾ ವಹಿಸಿದ್ದರು. ಕರುಣಾನಿಧಿ ಜಯಲಲಿತಾ ಮುಂದೆ ಸೋಲು ಅನುಭವಿಸಿದ್ದರು.
ಅದಾದ ನಂತರ ಕರುಣಾನಿಧಿ ಮತ್ತೆ 2006ರಲ್ಲಿ ಅಧಿಕಾರಕ್ಕೆ ಬಂದರು. ಮತ್ತೆ ಮುಖ್ಯಮಂತ್ರಿ ಕುರ್ಚಿ ಅಲಂಕರಿಸಿದರು. 2011ರಲ್ಲಿ ಮತ್ತೆ ಜಯಲಲಿತಾ ವಿರುದ್ಧ ಸೋತರು. ಅಲ್ಲಿಗೆ ದ್ವೇಷದ ರಾಜಕಾರಣ ಆರಂಭವಾಗಿತ್ತು. ಜಯಲಲಿತಾರನ್ನು ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರುಣಾನಿಧಿಯವರನ್ನು ಬಂಧಿಸಿದ್ದರು, ಅದಕ್ಕೆ ತಿರುಗುಬಾಣವಾಗಿ ಅಧಿಕಾರಕ್ಕೆ ಬರುತ್ತಲೇ ಜಯಲಲಿತಾ ಕರುಣಾನಿಧಿಯವರನ್ನು ಬಂಧಿಸಲು ಆದೇಶ ನೀಡಿದರು. ತಮಿಳುನಾಡಿನಲ್ಲಿ ದೊಡ್ಡಮಟ್ಟದ ಗಲಭೆಯ ನಡುವೆಯೇ ಕರುಣಾನಿಧಿ ಜೈಲು ಸೇರಿದರು. ಎಐಎಡಿಎಂಕೆ ಮತ್ತು ಡಿಎಂಕೆ ಎರಡೂ ಪಕ್ಷಗಳ ಹುಟ್ಟು ದ್ರಾವಿಡ ಚಳವಳಿಯೇ ಆದರೂ ಅದು ಅಂತ್ಯಗೊಂಡಿದ್ದು ಮಾತ್ರ ದ್ವೇಷದ ರಾಜಕಾರಣದಲ್ಲಿ. ಪಕ್ಷದ ಹುಟ್ಟಿನಲ್ಲಿದ್ದ ಧ್ಯೇಯಗಳು ಮರೆಯಾಗಿದ್ದವು. ಕರುಣಾನಿಧಿಯೊಳಗಿದ್ದ ಸಾಹಿತಿ ಮರೆಯಾಗಿದ್ದ, ಕವಿ ಸಮಯ ಕಾಣೆಯಾಗಿತ್ತು. ಜಯಲಲಿತಾ ತನ್ನ ಗುರು ಎಂಜಿ ರಾಂಚಂದ್ರನ್ರನ್ನು ಕರುಣಾನಿಧಿ ಸೋಲಿಸಿದ್ದರು ಎಂಬ ಹಠಕ್ಕೆ ಪ್ರತಿಯಾಗಿ ಉತ್ತರ ಕೊಡುವ ಛಲಕ್ಕೆ ಬಿದ್ದರು. ದ್ರಾವಿಡ ಚಳವಳಿ ಹಳ್ಳ ಹಿಡಿದಿತ್ತು, ಹಿಂದಿ ಹೇರಿಕೆ ಮತ್ತು ಉತ್ತರ ಭಾರತೀಯರ ಹೇರಿಕೆಗಳು ದಕ್ಷಿಣ ಭಾರತೀಯರ ಅಂದರೆ ದ್ರಾವಿಡರ ಅಸ್ತಿತ್ವಕ್ಕೆ ಕೊಳ್ಳಿ ಇಡತೊಡಗಿತ್ತು. ಈಗ ಜಯಲಲಿತಾ ಅವರೂ ಬದುಕಿಲ್ಲ, ಕರುಣಾನಿಧಿಯವರೂ ವಿಧಿ ವಶರಾಗಿದ್ದಾರೆ. ತಮಿಳು ನಾಡು ಕಂಡ ಎರಡು ಪ್ರಭಾವಿ ರಾಜಕಾರಣಿಗಳು ಇಹ ಲೋಕ ತ್ಯಜಿಸಿದ್ದಾರೆ. ಈ ಮೂಲಕ ತಮಿಳುನಾಡು ರಾಜಕೀಯದ ಭವಿಷ್ಯ ಡೋಲಾಯಮಾನವಾಗುವ ಸಾಧ್ಯತೆಯೂ ಇದೆ.
ಕರುಣಾನಿಧಿ ಪುತ್ರ ಎಂಕೆ ಸ್ಟಾಲಿನ್ ಅಣ್ಣಾ ದ್ರಾವಿಡ ಮುನ್ನೇತ್ರ ಕರಗಳ ಪಕ್ಷದ ಚುಕ್ಕಾಣಿ ಹಿಡಿದು ಸಾಗುತ್ತಿದ್ದಾರೆ. ಅಳಗಿರಿ, ಕನಿಮೋಳಿ ಎಲ್ಲರೂ ಯುಪಿಎ ಸರ್ಕಾರದ ಅಧಿಕಾರಾವಧಿಯಲ್ಲಿ 2ಜಿ ಸ್ಪೆಕ್ಟ್ರಂ ಭ್ರಷ್ಟಾಚಾರದ ಆರೋಪಿಗಳು. ಒಟ್ಟಿನಲ್ಲಿ ದ್ರಾವಿಡ ಚಳವಳಿಯಲ್ಲಿ ಪಾಲ್ಗೊಳ್ಳದ ಹೊಸ ತಲೆಮಾರಿನ ರಾಜಕಾರಣಿಗಳ ಕೈಗೆ ತಮಿಳು ನಾಡು ಸಿಗಲಿದೆ.
sorce;news18