ಶಿರಸಿ: ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ವಿವರಿಸಿ, ಆ ಸಮಸ್ಯೆಗಳನ್ನು ಬಗೆಹರಿಸುವಂತೆ ಕೋರಿದರು.
ಕ್ಷೇತ್ರದಲ್ಲಿ ಈ ವರ್ಷದ ಅತಿವೃಷ್ಟಿಯಿಂದ ಹಾನಿಯಾದ ರಸ್ತೆಗಳು ಹಾಗೂ ಸೇತುವೆ ಹಾಗೂ ಕಾಲುಸಂಕಗಳ ಮರು ನಿರ್ಮಾಣ ಹಾಗೂ ಸುಧಾರಣೆಗೆ ೧೦ ಕೋಟಿ ರೂ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿಕೊಂಡರು. ಹಾಗೂ ಟೆಲಿಮೆಟ್ರಿಕ್ ಮಳೆ ಮಾಪನ ಹಾಗೂ ಕಂದಾಯ ಇಲಾಖೆ ಈ ಹಿಂದೆ ಅಳವಡಿಸಿದ ಮಳೆ ಮಾಪನದ ದಾಖಲಾತಿಯಲ್ಲಿ ವ್ಯತ್ಯಾಸವಾದ ಕುರಿತು ವಿವರಿಸಿ, ಮಳೆ ಮಾಪನದ ದಾಖಲಾತಿಗಳ ವ್ಯತ್ಯಾಸವನ್ನು ಸರಿಪಡಿಸಿ ರೈತರಿಗೆ ಬೆಳೆ ವಿಮೆ ಸಿಗುವಂತೆ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿಯವರಲ್ಲಿ ಕೋರಿದರು.
ಹಾಗೂ ಈ ವರ್ಷ ಅತಿವೃಷ್ಟಿಯಿಂದ ರೈತರು ಬೆಳೆದ ಅಡಿಕೆ, ಕಾಳು ಮೆಣಸು, ಹಾಗೂ ಭತ್ತದ ಬೆಳೆಗಳಿಗೆ ಕೊಳೆ ರೋಗ ಉಂಟಾಗಿದ್ದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕಾರಣ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿಕೊಂಡರು ಎಂದು ವರದಿಯಾಗಿದೆ.