ಕಾರವಾರ: ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಜಿಲ್ಲೆಯ 8 ಕಡೆಗಳಲ್ಲಿಯೂ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಜಿಲ್ಲಾ ಬಿಜೆಪಿ ಉಸ್ತುವಾರಿ ವಿಕ್ರಮಾರ್ಜುನ ತಿಂಗಳೆ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ 3 ನಗರಸಭೆ, 3 ಪುರಸಭೆ ಹಾಗೂ 2 ಪಟ್ಟಣ ಪಂಚಾಯತ್ ವ್ಯಾಪ್ತಿಗಳಿಗೂ ಭೇಟಿ ನೀಡಿ ಪೂರ್ವ ಸಿದ್ಧತಾ ಸಭೆಗಳನ್ನು ನಡೆಸಲಾಗಿದೆ ಎಂದರು.
ಜಿಲ್ಲೆಯಲ್ಲಿ 8 ಕಡೆ ನಡೆಯುವ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯಿಂದ ಎಲ್ಲಿಯೂ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿಯುವುದಿಲ್ಲ. ಇನ್ನು ಕಳೆದ ವಿಧಾನಸಭಾ ಚುನಾವಣೆಯ ವೇಳೆ ಪಕ್ಷ ವಿರೋಧಿ ಕೃತ್ಯ ಮಾಡಿದ ಯಾರನ್ನೂ ಕೂಡ ಈ ಬಾರಿ ಅಭ್ಯರ್ಥಿಗಳನ್ನಾಗಿ ಮಾಡುವುದಿಲ್ಲ ಎಂದರು.

ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದನ್ನು ಗಮನಿಸಿದಾಗ ಬಿಜೆಪಿಯ ಕಾರ್ಯಕರ್ತರು ಜನರ ಸೇವೆ ಮಾಡಲು ಉತ್ಸುಕರಾಗಿರುವುದು ತಿಳಿದು ಬರುತ್ತಿದೆ. ಸ್ಥಳೀಯ ಶಾಸಕರ ನೇತೃತ್ವದಲ್ಲಿ ಹಾಗೂ ಬಿಜೆಪಿಯ ಶಾಸಕರಿಲ್ಲದ ಭಾಗಗಳಲ್ಲಿ ಮಾಜಿ ಶಾಸಕರ ನೇತೃತ್ವದಲ್ಲಿ ಅಭ್ಯರ್ಥಿಗಳ ಪಟ್ಟಿ ಸಿದ್ಧ ಪಡಿಸಿ ಕೋರ್ ಕಮಿಟಿಗೆ ನೀಡಲಾಗುತ್ತದೆ. ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿರುವ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆಯವರನ್ನೊಳಗೊಂಡ ಈ ಕೋರ್ ಕಮಿಟಿಯು ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಲಿದೆ ಎಂದರು.
ಲೋಕಸಭೆಯ ಚುನಾವಣೆಗೂ ಈಗಾಗಲೇ ಜಿಲ್ಲೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯ ವೇಳೆ ಏನೇನು ಲೋಪಗಳಾಗಿವೆ? ಅಲ್ಲಿ ಹೇಗೆ ಸಿದ್ಧತೆ ನಡೆಸಬೇಕು ಎಂಬುದನ್ನು ಅವಲೋಕಿಸಲು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ 3 ರಾಜ್ಯದ ಸಮಿತಿಗಳನ್ನು ರಚಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೆ ಈ ಸಮಿತಿಗಳು ಭೇಟಿ ನೀಡಿ ಸಭೆ ನಡೆಸಲಿವೆ. ಆ.9ರಿಂದ ಈ ಸಮಿತಿಗಳು ಪ್ರವಾಸ ಆರಂಭ ಮಾಡಲಿದ್ದು ಆ.14 ರಂದು ಜಿಲ್ಲೆಗೆ ಒಂದು ಸಮಿತಿ ಆಗಮಿಸಲಿದೆ. ಈ ತಂಡದಲ್ಲಿ ಪ್ರಮುಖರಾದ ಗೋವಿಂದ ಕಾರಜೋಳ, ಶೋಭಾ ಕರಂದ್ಲಾಜೆ ಹಾಗೂ ರವಿಕುಮಾರ ಇದ್ದಾರೆ. ಈ ತಂಡವು ಶಕ್ತಿ ಕೇಂದ್ರಕ್ಕಿಂತ ಮೇಲ್ಪಟ್ಟ ಎಲ್ಲ ಪ್ರಮುಖರ ಸಭೆಯನ್ನು ಯಲ್ಲಾಪುರದಲ್ಲಿ ನಡೆಸಲಿದೆ ಎಂದು ತಿಳಿಸಿದರು.

RELATED ARTICLES  ಎ.ಟಿ.ಎಂ ಕೇಂದ್ರದಲ್ಲಿ ಸಹಾಯ ಮಾಡುವ ನೆಪದಲ್ಲಿ ಜನರಿಗೆ ಮೋಸ‌ ಮಾಡುತ್ತಿದ್ದ ಖತರ್ನಾಕ್ ಆಸಾಮಿ ಪೊಲೀಸ್ ಬಲೆಗೆ

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ, ಶಾಸಕಿ ರೂಪಾಲಿ ನಾಯ್ಕ, ಗಣಪತಿ ಉಳ್ವೇಕರ, ನಾಗರಾಜ ನಾಯಕ, ರಾಜೇಶ ನಾಯಕ, ಬೀರಣ್ಣ ಮೊಗಟಾ ಮುಂತಾದವರು ಇದ್ದರು.

RELATED ARTICLES  ಗಣಪತಿ ವೆಂಕಟರಮಣ ಹೆಗಡೆ ಮೂಡ್ಕಳಿ ಇನ್ನಿಲ್ಲ

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರವು ಆಂತರಿಕ ಕಲಹದಿಂದ ಕೆಲವೇ ದಿನಗಳಲ್ಲಿ ಪತನಗೊಳ್ಳಲಿದೆ. ಗುಂಡೂರಾವ್ ಅವರು ಬಿಜೆಪಿಯು ಸಮಿಶ್ರ ಸರ್ಕಾರವನ್ನು ಕೆಡವಲು ಪ್ರಯತ್ನಿಸುತ್ತಿದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದರೆ ಬಿಜೆಪಿಯ ಪ್ರಯತ್ನ ಇಲ್ಲದೇ ಈ ಸರ್ಕಾರ ಅಂತ್ಯಗೊಳ್ಳಲಿದೆ ಎಂದರು. ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ರ ವ್ಯವಹಾರ ನಡೆಸುತ್ತಿದಾರೆಯೇ ಹೊರತು ಪರಸ್ಪರ ಮಾತನಾಡಿಕೊಳ್ಳುತ್ತಿಲ್ಲ. ಹೀಗೆ ಮುಂದುವರೆದಲ್ಲಿ ಕೆಲವೇ ದಿನಗಳಲ್ಲಿ ಈ ಸರ್ಕಾರದ ಮೈತ್ರಿ ಮುರಿಯಲಿದೆ ಎಂದರು.