ಬೆಂಗಳೂರು: ಶ್ರೀರಾಮಚಂದ್ರಾಪುರಮಠದ ಗಿರಿನಗರ ನಿವೇಶನದಲ್ಲಿ ಕಟ್ಟಡ ಕಟ್ಟಲು ಮಂಜೂರಾಗಿದ್ದ ನಕ್ಷೆಯನ್ನು ಅಕಾರಣವಾಗಿ ರದ್ದುಪಡಿಸಿದ್ದ ಬಿಬಿಎಂಪಿ, ಇದೀಗ ತನ್ನ ಆದೇಶವನ್ನೇ ಹಿಂಪಡೆದಿದೆ. ಬಿಬಿಎಂಪಿ ಕ್ರಮದ ಕುರಿತಾಗಿ ರಾಜ್ಯ ಉಚ್ಚನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ, ಬಿಬಿಎಂಪಿ ತನ್ನಿಂದಾದ ಪ್ರಮಾದವನ್ನು ಸರಿಪಡಿಸಿಕೊಂಡಿದೆ. ಹೀಗಾಗಿ ಕೆಟ್ಟಮೇಲೆ ಬುದ್ದಿ ಬಂತು ಎಂಬ ಮಾತು ಬಿಬಿಎಂಪಿ ಗೆ ಅನ್ವಯವಾಗುವಂತಿದೆ.
ಪ್ರಸ್ತುತ ಜಾಗವು 1978ನೇ ಇಸವಿಯಲ್ಲಿ ಶ್ರೀರಾಮಚಂದ್ರಾಪುರಮಠಕ್ಕೆ ಕ್ರಯಪತ್ರದ ಮೂಲಕ ನೋಂದಾಯಿತವಾಗಿದ್ದು, ಶ್ರೀಮಠದ ಹೆಸರಿನಲ್ಲಿ ಖಾತಾ ಆಗಿ, ಕಂದಾಯವನ್ನೂ ಕಟ್ಟಿಕೊಂಡು ಬರಲಾಗುತ್ತಿದೆ. ಜಾಗವು ಮಠದ ಸ್ವಾಧೀನದಲ್ಲೇ ಇದ್ದು, ಎರಡು ಮಹಡಿಯ ಕಟ್ಟಡವು ಇತ್ತು. ಆ ಜಾಗದಲ್ಲಿ ನೂತನ ಧರ್ಮಶಾಲಾ ಕಟ್ಟಡವನ್ನು ನಿರ್ಮಿಸಲು ಬಿಬಿಎಂಪಿಯಿಂದ ಅಧಿಕೃತ ಕಟ್ಟಡ ನಕಾಶೆಗೆ ಪರವಾನಗಿಯನ್ನು ಪಡೆದು, ಕಾಮಗಾರಿಯನ್ನು ಆರಂಭಿಸಲು ಮುಂದಾಗಿತ್ತು. ಆದರೆ 2015 ರಲ್ಲಿ ಬಿ.ಡಿ.ಎ ಯಿಂದ ಬಂದ ಪತ್ರದ ಆಧಾರದಮೇಲೆ, ಪರವಾನಗಿ ಅನುಮತಿಯನ್ನು  ಹಿಂಪಡೆದು ಬಿಬಿಎಂಪಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ, ಮಠ ಉಚ್ಚನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿತ್ತು.
ವಿಚಾರಣಾ ಸಂದರ್ಭದಲ್ಲಿ ಬಿಬಿಎಂಪಿಯ ಕ್ರಮದ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದ ಉಚ್ಚನ್ಯಾಯಾಲಯ, ಸಂಬಂಧಿತ  ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳಿಗೆ ತಲಾ 50,000 ರೂ ದಂಡ ಸ್ವರೂಪವಾಗಿ ಉಚ್ಚನ್ಯಾಯಾಲಯದಲ್ಲಿ ಠೇವಣಿ ಮಾಡಲು, ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳು ಹಾಜರಿರಲು ಹಾಗೂ ಬಿಬಿಎಂಪಿಯ ಪರವಾನಗಿ ರದ್ಧತಿ ಆದೇಶಕ್ಕೆ ತಡೆಯಾಜ್ಜೆಯನ್ನು ನೀಡಿ  ಆದೇಶಿಸಿತ್ತು.

RELATED ARTICLES  ಈ ವರ್ಷ ಜುಲೈ 1ರಿಂದ ಆಧಾರ್‌ ದೃಢೀಕರಣಕ್ಕೆ ಮುಖದ ಬಿಂಬ

ಬಿಬಿಎಂಪಿ ಕ್ರಮದ ಕುರಿತಾಗಿ ರಾಜ್ಯ ಉಚ್ಚನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿ,  ಬಿಬಿಎಂಪಿ ಆದೇಶಕ್ಕೆ ತಡೆಯಾಜ್ಞೆ ನೀಡಿ ತರಾಟೆಗೆಗೆ ತೆಗೆದುಕೊಂಡ ನಂತರ ಎಚ್ಚೆತ್ತುಕೊಂಡ ಬಿಬಿಎಂಪಿ, ತನ್ನ ಹಿಂದಿನ ಆದೇಶವನ್ನು( Ad.com/SUT/1011/12-13) ಹಿಂಪಡೆದಿರುವುದಾಗಿ ಪತ್ರಮುಖೇನ ಶ್ರೀಮಠಕ್ಕೆ ತಿಳಿಸಿದೆ. ಆ ಮೂಲಕ ಬಿಬಿಎಂಪಿ ತನ್ನಿಂದಾಗಿದ್ದ ಪ್ರಮಾದವನ್ನು ಸರಿಪಡಿಸಿಕೊಂಡಿದೆ.

RELATED ARTICLES  ಎಲ್ಲರನ್ನೂ ಗೌರವಿಸಿ, ಸತ್ಕರಿಸಿ : ವಿದ್ವಾಂಸ ಕೃಷ್ಣರಾಜ ಕುತುಪ್ಪಾಡಿ ಅಭಿಮತ | ಸಾಧನಾಕಾಲೇಜಿನಲ್ಲಿ ಸಂಭ್ರಮದ ಸಂಸ್ಕೃತೋತ್ಸವ|