ಮುನ್ನಾರ್ : ಮುನ್ನಾರ್ ಒಂದು ಸುಂದರವಾದ ಪ್ರವಾಸಿಗರ ತಾಣ. ಈಗ ಈ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕೇರಳದ ಪ್ರಸಿದ್ಧ ಮುನ್ನಾರ್ ಹಿಲ್ ಸ್ಟೇಶನ್ಗೆ ಸಮೀಪದ ಇಡುಕ್ಕಿಯ ಪಳ್ಳಿವಸಳ್ ಧಾಮದಲ್ಲಿ ಸುಮಾರು 20 ಮಂದಿ ವಿದೇಶೀ ಪ್ರವಾಸಿಗರು ಸೇರಿ ಒಟ್ಟೂ 60 ಮಂದಿ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಧಾರಾಕಾರ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು ಈ ಪ್ರವಾಸೀ ಧಾಮವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳೂ ಸಂಪರ್ಕ ಕಡಿತಗೊಂಡಿದೆ.
ಪ್ರವಾಸಿಗರು ಕಳೆದ ಎರಡು ದಿನಗಳಿಂದ ಈ ಧಾಮದಲ್ಲಿ ಸಿಲುಕಿಕೊಂಡಿದ್ದಾರೆ. ಇವರನ್ನು ಸ್ಥಳಾಂತರಿಸಲು ಪ್ರಯತ್ನದಲ್ಲಿ ಎನ್ಡಿಆರ್ಎಫ್ ಮತ್ತು ಸೇನಾ ಸಿಬಂದಿಗಳು ತೊಡಗಿಕೊಂಡಿದ್ದಾರೆ.
ಕೇರಳಕ್ಕೆ ನೆರೆ ಕಂಡು ಬರುತ್ತಿರುವ ಈ ದಿನಗಳಲ್ಲಿ ಭೇಟಿ ಕೊಡದಂತೆ ಅಮೆರಿಕ ತನ್ನ ಪ್ರಜೆಗಳಿಗೆ ಸೂಚನೆ ಕೊಟ್ಟಿದೆ. ನಿನ್ನೆ ಶುಕ್ರವಾರ ಬಿಡುಗಡೆ ಮಾಡಲಾಗಿರುವ ಅಮೆರಿಕ ಸೂಚನೆಯಲ್ಲಿ ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ನೈಋತ್ಯ ಮಾನ್ಸೂನ್ ಮಳೆಯಿಂದಾಗಿ ಭಾರಿ ಭೂಕುಸಿತ ಮತ್ತು ಪ್ರವಾಹ ಉಂಟಾಗುತ್ತಿರುವ ಬಗ್ಗೆ ಎಚ್ಚರಿಕೆಯನ್ನು ಕೊಡಲಾಗಿದೆ.
ಪ್ರವಾಹ, ಭೂಕುಸಿತ, ನೆರೆ,, ಜಡಿ ಮಳೆ ಆಗತ್ತಿರುವ ಕೇರಳದ ಯಾವುದೇ ಭಾಗಕ್ಕೂ ಹೋಗದಂತೆ ಅಮೆರಿಕ ತನ್ನ ಪ್ರಜೆಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.
ಕೇರಳದ ಮಳೆಯಿಂದ ಬಲಿಯಾಗಿರುವವರ ಸಂಖ್ಯೆ 26ಕ್ಕೇರಿದೆ ಎಂದು ವರದಿಯಾಗಿದೆ.