ಪತಿಗೆ ಆಯಸ್ಸು ಆರೋಗ್ಯ, ಅಭಿವೃದ್ಧಿ ನೀಡಲೆಂದು ಬೇಡಿಕೊಂಡು ದೀರ್ಘಕಾಲ ಸುಮಂಗಲಿಯಾಗಿರುವಂತೆ ಹರಸಲು ಬೇಡುವ ಹಬ್ಬವೇ ಭೀಮನ ಅಮವಾಸ್ಯೆ, ಅವಿವಾಹಿತ ಹೆಣ್ಣು ಮಕ್ಕಳು ತಮಗೆ ಭೀಮನಂತೆ ಇರುವ ಗಂಡ ಸಿಗಲೆಂದು ಶಿವನನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ. ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲವಾದರೂ, ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುತ್ತಾರೆ. ಇದಕ್ಕೆ ಪತಿ ಸಂಜೀವಿನಿ ವ್ರತ ಎಂದೂ ಕೂಡ ಕರೆಯುತ್ತಾರೆ. ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ.

ಒಮ್ಮೆ ವ್ರತ ಕೈಗೊಂಡರೆ ಐದು, ಒಂಭತ್ತು ಅಥವಾ ಹದಿನಾರು ವರ್ಷ ಸಂಪೂರ್ಣಗೊಳಿಸಿ ಉದ್ಯಾಪನೆ ಮಾಡಿ ಎಲ್ಲರಿಗೂ ಸಿಹಿಯೂಟ ಹಾಕಿಸಬೇಕು ಎಂದು ಹಿಂದೂ ಪುರಾಣಗಳು ಹೇಳುತ್ತವೆ. ಆಷಾಢದಲ್ಲಿ ಗಂಡನ ಸಂಗ ತೊರೆದು ತವರಿನ ಗೂಡು ಸೇರಿಕೊಂಡ ಹೆಂಗಳೆಯರು ಗಂಡನ ಪಾದಕ್ಕೆರಗಿ ಆಶೀರ್ವಾದ ಪಡೆಯುವುದು ವಾಡಿಕೆ.

ಭೀಮನ ಅಮಾವಾಸ್ಯೆ ಹಿನ್ನೆಲೆ:

ಆಸೆ ಬುರುಕ ಬ್ರಾಹ್ಮಣನೊಬ್ಬ ರಾಜಕುಮಾರನ ಶವದೊಂದಿಗೆ ತನ್ನ ಮಗಳ ಮದುವೆಯನ್ನು ಮಾಡಿ ಬಿಡುತ್ತಾನೆ. ಸುರಿಯುತ್ತಿದ್ದ ಮಳೆಯಲ್ಲಿ ಶವವನ್ನೂ ಹಾಗೂ ವಧುವನ್ನೂ ರಾಜ ಪರಿವರದವರೂ ನದಿ ತೀರದಲ್ಲಿ ಬಿಟ್ಟು ಹೋಗುತ್ತಾರೆ. ಶವದ ಮುಂದೆ ಕುಳಿತು ರೋಧಿಸುತ್ತಿದ್ದ ಆ ವಧು, ಮರಳಿನಲ್ಲಿ ಶಿವಲಿಂಗ ಮಾಡಿ ಪೂಜಿಸುತ್ತಾಳೆ. ಅವಳ ಭಕ್ತಿಗೆ ಮೆಚ್ಚಿದ ಶಿವಪಾರ್ವತಿಯರು ಪ್ರತ್ಯಕ್ಷರಾಗಿ ರಾಜಕುಮಾರನಿಗೆ ಜೀವದಾನ ಮಾಡುತ್ತಾರೆ. ಅಮವಾಸ್ಯೆಯ ದಿನ ತನ್ನ ಪತಿಯನ್ನು ಬದುಕಿಸಿಕೊಳ್ಳಲು ನಡೆಸಿದ ಪೂಜೆಯೇ ಜ್ಯೋತಿರ್ಭಿಮೇಶ್ವರ ವ್ರತ ಎಂಬ ಐತಿಹ್ಯವಿದೆ.

RELATED ARTICLES  ಮನಸೂರೆಗೊಳಿಸುವ ಚಿತ್ರಗಳನ್ನು ಬಿಡಿಸುವ ಅಪ್ರತಿಮ ಚಿತ್ರ ಕಲಾವಿದ ಸಚಿನ್

ಭೀಮನ ಅಮವಾಸ್ಯೆ ವ್ರತಾಚಾರಣೆಯ ಹಿನ್ನೆಲೆಯ ಬಗ್ಗೆ ಇನ್ನು ಒಂದು ಐತಿಹ್ಯ ಇದೆ. ಕುಂಡಿನಿ ಪಟ್ಟಣದಲ್ಲಿ ಪತಿಭಕ್ತಳೂ, ಶಾಸ್ತ್ರಜ್ಞಳೂ, ನಿರ್ಮಲ ಮನದವಳೂ ಆದ ಚಾರುಮತಿ ಎಂಬ ಸಾಧ್ವಿ ಇರುತ್ತಾಳೆ. ಈ ಬ್ರಾಹ್ಮಣ ಸಾಧ್ವಿಗೆ ಮಹಾಲಕ್ಷ್ಮಿ ಕನಸಿನಲ್ಲಿ ಕಾಣಿಸಿಕೊಂಡು ತನ್ನನ್ನು ನಿರ್ದಿಷ್ಟ ಪ್ರಕಾರವಾಗಿ ಪೂಜಿಸಲು ತಿಳಿಸುತ್ತಾಳೆ. ಅದರಂತೆ ಚಾರುಮತಿ ಮಂಗಳಸ್ನಾನ ಮಾಡಿ, ಅಕ್ಕಿಯಿಂದ ಪರಿವೃತವಾದ ಕಲಶದಲ್ಲಿ ವರಲಕ್ಷ್ಮಿಯನ್ನು ಆವಾಹನೆ ಮಾಡಿ, ಕಲ್ಪೋಕ್ತ ಪ್ರಕಾರ ಸಂಧ್ಯಾಕಾಲದಲ್ಲಿ ಅರ್ಚಿಸಿ, ಬಲಗೈಗೆ ದಾರ ಕಟ್ಟಿಕೊಂಡು ತುಪ್ಪದಿಂದ ಮಾಡಿದ ಭಕ್ಷ್ಯಗಳನ್ನು ಬ್ರಾಹ್ಮಣರಿಗೆ ನಿವೇದಿಸಿ, ಸುಹಾಸಿನಿಯರಿಗೆ ದಕ್ಷಿಣೆ ಸಹಿತ ತಾಂಬೂಲ ನೀಡಿ ವ್ರತವಾಚರಿಸುತ್ತಾಳೆ. ಇದರ ಫಲವಾಗಿ ಅವಳು ಸಕಲ ಸೌಭಾಗ್ಯ ಪಡೆಯುತ್ತಾಳೆ. ಈ ಪ್ರಕಾರವಾಗಿ ಭೀಮನ ಅಮಾವಾಸ್ಯೆಯ ದಿನ ಹೆಣ್ಣು ಮಕ್ಕಳು ಮತ್ತು ಸುಮಂಗಲಿಯರು ಮಂಗಳಸ್ನಾನ ಮಾಡಿ, ಮಂಟಪ ನಿರ್ಮಿಸಿ, ಅದರಲ್ಲಿ ಧಾನ್ಯರಾಶಿ ಮಾಡಿ, ಅದರ ಮೇಲೆ ದೀಪವನ್ನಿಟ್ಟು, ಗೋಧಿಹಿಟ್ಟಿನಿಂದ ಮಾಡಿದ ಭಕ್ಷ್ಯವನ್ನು ನೈವೇದ್ಯ ಮಾಡಿ ಈಶ್ವರನನ್ನು ಆರಾಧಿಸುತ್ತಾರೆ. ಹೊಸಿಲ ಮೇಲೆ ಭಂಡಾರ ಇಟ್ಟು ಸೋದರರಿಂದ ಒಡೆಸುವ ಪದ್ಧತಿಯೂ ಸಂಪ್ರದಾಯಸ್ಥ ಬ್ರಾಹ್ಮಣರ ಮನೆಯಲ್ಲಿ ಇದೆ.

RELATED ARTICLES  ಡಿ.ಸಿ ಹಾಗೂ ಎಸ್.ಪಿ ಗೆ ಸಮನ್ಸ್ ಜಾರಿ

ಪೂಜಾ ವಿಧಾನ:-

ಈ ವ್ರತವನ್ನು ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ದಿನ ಆಚರಿಸಬೇಕು. ಹೆಣ್ಣು ಮಕ್ಕಳು ಮದುವೆಯಾದ ನಂತರ ಒಂಭತ್ತು ವರ್ಷ ಈ ವ್ರತ ಮಾಡುವ ಪದ್ಧತಿ ಇದೆ. ಒಂದು ತಟ್ಟೆಯಲ್ಲಿ ಧಾನ್ಯ ರಾಶಿ ಹಾಕಿ , ಅದರ ಮೇಲೆ 2 ದೀಪದ ಕಂಭ ಇಡಬೇಕು. ತುಪ್ಪ ಹಾಕಿ ದೀಪ ಹಚ್ಚಬೇಕು . ಈ ದೀಪಸ್ತಂಭದಲ್ಲಿ ಈಶ್ವರ ಪಾರ್ವತಿಯನ್ನು ಆವಾಹನೆ ಮಾಡಿ ಪೂಜೆ ಮಾಡಬೇಕು . ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ, 9 ಗಂಟಿನ ಗೌರಿ ದಾರ ಇಟ್ಟು ಪೂಜೆ ಮಾಡಬೇಕು, ಪೂಜೆ ನಂತರ ಕೈಗೆ ಕಟ್ಟಿಕೊಳ್ಳಬೇಕು. ಮೊದಲು ಗಣಪತಿ ಪೂಜೆ ಮಾಡಿ ನಂತರ ಭೀಮೆಶ್ವರನ ಪೂಜೆ ಮಾಡಬೇಕು .ಜೊತಗೆ ಗಣೇಶ ಅಷ್ಟೋತ್ತರ , ಶಿವ ಅಷ್ಟೋತ್ತರ ಗಳನ್ನು ಹೇಳಿಕೊಂಡು ಪೂಜೆ ಮಾಡಬೇಕು.

ಹೀಗೆ ಪ್ರತಿ ವರ್ಷ ಪೂಜೆ ಮಾಡುವುದರಿಂದ ಮನೆಯಲ್ಲಿ ಸುಖ, ಸಂತೋಷ ನೆಮ್ಮದಿ ದೊರೆತು ಆಯುಷ್ಯ, ಆರೋಗ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಹೆಣ್ಣು ಮಕ್ಕಳು ಪ್ರತಿ ವರ್ಷ ಭೀಮನ ಅಮಾವಾಸ್ಯೆಯಲ್ಲಿ ವ್ರತಾಚರಣೆ ಮಾಡುತ್ತಾರೆ.