ಶ್ರೀಶಂಕರಾಚಾರ್ಯರ ಕಾಲದಿಂದಲೂ ಶ್ರೀರಾಮಚಂದ್ರಾಪುರಮಠ ಹಾಗೂ ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಪಾರಂಪರಿಕ ಸಂಬಂಧವಿದ್ದು, ೨೦೦೮ ರಲ್ಲಿ ಶ್ರೀಮಠಕ್ಕೆ ಪುನರ್ಹಸ್ತಾಂತರವಾದ ನಂತರ ದೇವಹಿತ – ಭಕ್ತಹಿತ – ಸೇವಕಹಿತ ಎಂಬ ಅಂಶಗಳನ್ನು ಇಟ್ಟುಕೊಂಡು ದೇವಾಲಯದ ಕೈಂಕರ್ಯವನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ರಾಜ್ಯ ಉಚ್ಚನ್ಯಾಯಾಲಯದ ಆದೇಶದಿಂದ ಶ್ರೀಮಠಕ್ಕೆ ಆಘಾತವಾಗಲೀ, ಹಿನ್ನೆಡೆಯಾಗಲೀ ಆಗಿಲ್ಲ. ಏಕೆಂದರೆ ಶ್ರೀಮಠಕ್ಕೆ ಮಹಾಬಲೇಶ್ವರ ದೇವಾಲಯ ಸೇವೆಯ ಸಾಧನವಾಗಿತ್ತು ಹೊರತು, ಸಂಪಾದನೆಯ ಮೂಲವಾಗಿರಲಿಲ್ಲ.

ಆದಿಗುರು ಶಂಕರಾಚಾರ್ಯರು ಶ್ರೀಕ್ಷೇತ್ರ ಗೋಕರ್ಣದಲ್ಲಿ ೧೩೦೦ ವರ್ಷಗಳ ಹಿಂದೆ ಶ್ರೀರಾಮಚಂದ್ರಾಪುರಮಠಕ್ಕೆ ಶ್ರೀಕಾರ ಹಾಕುವ ಜೊತೆಗೆ “ಅತ್ರತಿಷ್ಠ ಯತಿಶ್ರೇಷ್ಠ ಗೋಕರ್ಣೇ ಮುನಿಸೇವಿತೆ| ಮಹಾಬಲಸ್ಯ ಚ ಲಿಂಗಂಚ ನಿತ್ಯಂ ವಿಧಿವದರ್ಚನಮ್||” ಎಂದು ಶ್ರೀ ಮಹಾಬಲೇಶ್ವರ ದೇವಾಲಯದ ವ್ಯವಸ್ಥೆಯ ನಿರ್ವಹಣೆಯನ್ನು ಶ್ರೀಮಠಕ್ಕೆ ನೀಡಿದ್ದು, ಪರಂಪರಾಗತವಾಗಿ ಶ್ರೀಮಠ ಗೋಕರ್ಣದ ದೇವಾಲಯವನ್ನು ನಿರ್ವಹಿಸಿಕೊಂಡು ಬರುತ್ತಿದೆ. ಏತನ್ಮದ್ಯೆ, ಮಠಕ್ಕೆ ಸೇರಿದ ಮಹಾಬಲೇಶ್ವರ ದೇವಾಲಯ ಕಣ್ತಪ್ಪಿನಿಂದ ಮುಜರಾಯಿ ವ್ಯಾಪ್ತಿಗೆ ಸೇರಿತ್ತು. ಈ ತಪ್ಪನ್ನು ೨೦೦೮ ರಲ್ಲಿ ಸರಿಪಡಿಸಿಕೊಂಡ ಘನ ಸರ್ಕಾರ ದೇವಾಲಯವನ್ನು ಶ್ರೀಮಠಕ್ಕೆ ಪುನಃ ಹಸ್ತಾಂತರ ಮಾಡಿ, ಅವ್ಯವಸ್ಥೆಯ ಆಗರವಾಗಿದ್ದ ದೇವಾಲಯವನ್ನು ಸುವ್ಯವಸ್ಥೆಯೆಡೆಗೆ ಕೊಂಡೊಯ್ಯಲು ಅನುವುಮಾಡಿಕೊಟ್ಟಿತ್ತು.

RELATED ARTICLES  ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಮಂಜುನಾಥ ಎಂ.ನಾಯ್ಕ ಆಯ್ಕೆ

೨೦೦೮ ರಲ್ಲಿ ಮಹಾಬಲೇಶ್ವರ ದೇವಾಲಯ ಶ್ರೀಮಠಕ್ಕೆ ಪುನಃ ಹಸ್ತಾಂತರವಾದ ನಂತರ ಶ್ರೀಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಯ ಮಹಾಪರ್ವವೇ ನಡೆದಿದ್ದು, ಕಳೆದ ಎರಡು ವರ್ಷಗಳ ಹಿಂದೆ ದೇವಾಲಯದ ಸುವ್ಯವಸ್ಥಿತ ಆಡಳಿತ, ಸಮರ್ಥ ನಿರ್ವಹಣೆ ಹಾಗೂ ಪಾರದರ್ಶಕತೆಯನ್ನು ಪ್ರಮಾಣೀಕರಿಸುವ ISO ಪ್ರಮಾಣಪತ್ರ ಸಿಕ್ಕಿರುವುದು ಶ್ರೀಮಠದ ಮಾದರಿ ಆಡಳಿತಕ್ಕೆ ಸಾಕ್ಷಿ ಯಾಗಿದೆ.

ಹಸ್ತಾಂತರಕ್ಕೂ ಮೊದಲು ಹಾಗೂ ಹಸ್ತಾಂತರದ ನಂತರ ಅಜಗಜಾಂತರ ವ್ಯತ್ಯಾಸವನ್ನು ಗಮನಿಸಬಹುದಾಗಿದೆ ; ೨೦೦೮ ಕ್ಕೂ ಮೊದಲು ಲೆಕ್ಕ ಪತ್ರಗಳೇ ಇಲ್ಲದಿರುವುದು ಹಾಗೂ ಮಠದ ಆಡಳಿತದಲ್ಲಿ ಪ್ರತಿ ರೂಪಾಯಿಗೂ ಆಡಿಟೆಡ್ ಲೆಕ್ಕ ಪತ್ರ ಇರುವುದು, ಮೊದಲು ಆಗಮಿಸುವ ಯಾತ್ರಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದಿರುವುದು ಹಾಗೂ ಈಗ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಎರಡು ಹೊತ್ತಿನ ಪ್ರಸಾದ ಭೋಜನ ವ್ಯವಸ್ಥೆ ಮಾಡಿರುವುದು, ಸ್ವಚ್ಛತೆಗೆ ಆದ್ಯತೆ ನೀಡಿರುವುದು, ನಾಡಿನ ಎಲ್ಲ ಸಂತರಿಗೆ ದಿನಕ್ಕೊಬ್ಬರಿಗೆ ‘ಗೋಕರ್ಣ ಗೌರವ’ನೀಡಲು ಆರಂಭಿಸಿದ್ದೂ ಸೇರಿದಂತೆ ದೇವಹಿತ – ಭಕ್ತಹಿತ – ಸೇವಕಹಿತ ಎಂಬ ಅಂಶಗಳ ಆಧಾರದಲ್ಲಿ ಅಭಿವೃದ್ಧಿಯ ಮಹಾಪರ್ವವೇ ನಡೆದಿದೆ.

RELATED ARTICLES  ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಮೂವರನ್ನು ಬಂಧಿಸಿದ ಕುಮಟಾ ಪೊಲೀಸರು.

ಆದೇಶಕ್ಕೆ ಒಂದು ತಿಂಗಳ ತಡೆ: ಮಹಾಬಲೇಶ್ವರ ದೇವಾಲಯದ ಆಡಳಿತ ನಿರ್ವಹಣೆಯ ಕುರಿತಾಗಿ ರಾಜ್ಯ ಉಚ್ಚ ನ್ಯಾಯಾಲಯ ನಿನ್ನೆ ನೀಡಿರುವ ಆದೇಶಕ್ಕೆ ಉಚ್ಚ ನ್ಯಾಯಾಲಯವೇ ಒಂದು ತಿಂಗಳ ತಡೆ ನೀಡಿದೆ. ತಿಂಗಳ ನಂತರ ಈ ಆದೇಶ ಅನ್ವಯವಾಗಬಹುದಾಗಿದ್ದು, ಅಲ್ಲಿಯವರೆಗೆ ಯಥಾಸ್ಥಿತಿ ಮುಂದುವರಿಯಲಿರುವುದನ್ನು ಜನತೆ ಗಮನಿಸಬೇಕಿದೆ.

ಇತಿಹಾಸವನ್ನು ಅವಲೋಕಿಸಿದಾಗ ಶ್ರೀಮಠ ಹಾಗೂ ಸಾರ್ವಭೌಮ ಮಹಾಬಲೇಶ್ವರ ದೇವಾಲಯದ ಸಂಬಂಧ ಸುಸ್ಪಷ್ಟವಿದ್ದು, ವರ್ತಮಾನವನ್ನು ಅವಲೋಕಿಸಿದಾಗ ಶ್ರೀಕ್ಷೇತ್ರದಲ್ಲಿ ಶ್ರೀಮಠದಿಂದಾದ ಅಭಿವೃದ್ಧಿ ಕಾರ್ಯಗಳು ಜನಮಾನಸದಲ್ಲಿ ದಾಖಲಾಗಿವೆ. ಭವಿಷ್ಯದಲ್ಲಿ ಶ್ರೀಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಈ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಶ್ರೀಮಠ ಪ್ರಶ್ನಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

“ನಾವು ಗೋಕರ್ಣದ ಮಹಾಬಲೇಶ್ವರ ದೇವಾಲಯದಿಂದ ಹಣ – ಅಧಿಕಾರ – ಪ್ರತಿಷ್ಠೆ ಮುತಾಂಗಿ ಯಾವುದನ್ನೂ ಬಯಸದೇ, ಕೇವಲ ಸೇವೆಯ ಸಾಧನವಾಗಿ ಕಂಡಿದ್ದೇವೆ. ಪರಂಪರೆಯ ಸಂಬಂಧ ಇರುವುದರಿಂದ ದೇವಾಲಯದ ಸಂರಕ್ಷಣೆಯ ದೃಷ್ಟಿಯನ್ನಿಟ್ಟುಕೊಂಡು ಕಾನೂನಿನ ಅವಕಾಶಗಳನ್ನು ಬಳಸಿ ಈ ತೀರ್ಪನ್ನು ಪ್ರಶ್ನಿಸುತ್ತೇವೆ”

– ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ

IMG 20180811 WA0011