ಶಿರಸಿ:ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಶಿರಸಿ ಜಿಲ್ಲಾ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ರಾಧಾಕೃಷ್ಣ ಭಟ್ಟ ಭಟ್ಕಳ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ ಸಂಪನ್ನವಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕಾಗೇರಿ ಮಾಧ್ಯಮ ಕ್ಷೇತ್ರ ಸೂಕ್ಷ್ಮ ಸಂವೇದನೆ ಹೊಂದಿದ ಕ್ಷೇತ್ರವಾಗಿದೆ. ಸಮಾಜದ ಉಳಿದ ಕ್ಷೇತ್ರಗಳ ಪರಿಚಯ ಕೂಡ ಈ ಕ್ಷೇತ್ರದಿಂದ ಆಗಬೇಕಿದೆ. ಈ ನಿಟ್ಟಿನಲ್ಲಿ ಸಮಾಜ ಕೂಡ ಮಾಧ್ಯಮ ಕ್ಷೇತ್ರವನ್ನು ಸೂಕ್ಷ್ಮವಾಗಿ ಗಮನಿಸುತ್ತದೆ ಎಂಬುದನ್ನು ಪತ್ರಕರ್ತರು ಅರಿಯಬೇಕು. ಸಮಾಜ ಪರಿವರ್ತನೆಗೆ ಬೇಕಾದ ಪೂರಕ ಚಟುವಟಿಕೆ ಹಮ್ಮಿಕೊಳ್ಳಬೇಕು ಎಂದರು.

ದತ್ತಿನಿಧಿ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಮೋಹನ ಹೆಗಡೆ, ಪತ್ರಕರ್ತರಲ್ಲಿ ಅಹಂ ಭಾವ ಬಂದರೆ ಸಮಾಜದಲ್ಲಿ ಅವಾಂತರ ಹೆಚ್ಚುತ್ತದೆ. ಹಾಗಾಗಿ ಮುಕ್ತವಾಗಿ ಆಲೋಚಿಸುವ ಜೊತೆಗೆ ನಿಷ್ಪಕ್ಷಪಾತ ಹಾಗೂ ನಿಸ್ಪ್ರಹವಾದ ಬರವಣಿಗೆಗೆ ಒಗ್ಗಿಕೊಳ್ಳಬೇಕು ಎಂದು ಹೇಳಿದರು. ಕ್ರಿಯಾಶೀಲ ಪತ್ರಿಕೋದ್ಯಮ ಇಂದಿನ ಅಗತ್ಯತೆ ಎಂದ ಅವರು, ಪತ್ರಕರ್ತರು ಈ ಕ್ಷೇತ್ರದ ಎಲ್ಲೆ ಮೀರದೆ, ಸಹಿಷ್ಣುತೆಯ ಮೇರೆ ದಾಟದೆ ಕಾರ್ಯ ನಿರ್ವಹಿಸಬೇಕು. ಪತ್ರಕರ್ತ ತನ್ನ ಕೆಲಸಕ್ಕೆ ಬದ್ಧನಾಗಿರಬೇಕು. ಹಾಗಾದಾಗ ಮಾತ್ರ ವರದಿಯ ತೂಕ ಇಮ್ಮಡಿಸುತ್ತದೆ ಎಂದರು.

RELATED ARTICLES  ಭಟ್ಕಳದ ಸರಕಾರಿ ಅಸ್ಪತ್ರೆ ವೈದ್ಯ ಡಾಕ್ಟರ್ ಅರುಣ ಕುಮಾರ್ ಅವರಿಗೆ ಸನ್ಮಾನ

ಪತ್ರಿಕೆ ಕೊಂಡು ಓದುವವರ ಸಂಖ್ಯೆ ಕಡಿಮೆಯಿದೆ. ಪತ್ರಿಕೆ ಜನರವರೆಗೆ ತಲುಪಿಸುವ ವ್ಯವಸ್ಥೆಯ ಕೊರತೆಯಿದೆ. ಸಾಮಾಜಿಕ ಜಾಲತಾಣಗಳು ಮಾಧ್ಯಮಗಳಿಗೆ ಸವಾಲಾಗುತ್ತಿವೆ. ಮಾಧ್ಯಮರಂಗ ಜಾಗತಿಕವಾಗಿ ವಿಸ್ತರಿಸಿಕೊಂಡಾಗ ಇಂಥ ಹಲವು ಸಮಸ್ಯೆಗೆ ತಲೆ ಕೊಡಬೇಕು. ಈ ಎಲ್ಲ ಸವಾಲಿನ ನಡುವೆಯೂ ಪತ್ರಕರ್ತರು, ಪತ್ರಿಕೆ, ಮಾಧ್ಯಮಗಳು ಇಲ್ಲದಿದ್ದರೆ ಸಮಾಜ ಹಿಮ್ಮುಖ ಚಲನೆ ಮಾಡುತ್ತಿತ್ತು ಎಂಬ ಹಿರಿಮೆ ನಮ್ಮದಾಗಿದೆ ಎಂದರು. ಪತ್ರಕರ್ತರಿಗೆ ಉತ್ತರ ಕನ್ನಡ ಸಮೃದ್ಧ ಕ್ಷೇತ್ರವಾಗಿದೆ. ಇಲ್ಲಿನ ಪತ್ರಕರ್ತರು ಹೊಸ ವಿಷಯಕ್ಕಾಗಿ ತುಡಿಯುತ್ತಾರೆ ಎಂದು ಹೇಳಿದರು.

RELATED ARTICLES  ಗ್ರಾಹಕರ ಸೋಗಿನಲ್ಲಿ ಬಂದು ಕಳ್ಳತನ ಮಾಡಿ ಪರಾರಿಯಾಗಿದ್ದವರ ಬಂಧನ

ನೂತನ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ, ನಿಕಟಪೂರ್ವ ಅಧ್ಯಕ್ಷ ಜಿ.ಸುಬ್ರಾಯ ಭಟ್ಟ, ಉಪಾಧ್ಯಕ್ಷ ಅನಂತ ದೇಸಾಯಿ ಇದ್ದರು. ಪ್ರಧಾನ ಕಾರ್ಯದರ್ಶಿ ನರಸಿಂಹ ಅಡಿ ನಿರೂಪಿಸಿದರು.