ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಅಂಗಸಂಸ್ಥೆಗಳಿಂದ 72ನೇ ಸ್ವಾತಂತ್ರ್ಯೋತ್ಸವ ದಿನವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಟ್ರಸ್ಟಿನ ಗೌರವ ಕಾರ್ಯದರ್ಶಿಗಳಾದ ಶ್ರೀ ಮುರಲೀಧರ ಪ್ರಭು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿ, ನಮ್ಮ ರಾಷ್ಟ್ರವನ್ನು ಅಗ್ರಮಾನ್ಯ ರಾಷ್ಟ್ರವಾಗಿ ಪರಿವರ್ತಿಸಲು ಎಲ್ಲರೂ ಪಣತೊಡಬೇಕು. ನಿರಂತರವಾಗಿ ದೇಶದ ಗಡಿಯಲ್ಲಿ ಪಹರೆ ಕಾಯುವ ನಮ್ಮ ಯೋಧರನ್ನು ಗೌರವಿಸಿ. ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಅವರ ಕಾಣಿಕೆ ಅಪಾರ. ಅದೇ ರೀತಿ ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಹೊಣೆ ಹಾಗೂ ಕರ್ತವ್ಯವಾಗಿದೆ, ಆ ನಿಟ್ಟಿನಲ್ಲಿ ಸರ್ವರೂ ದೇಶಪ್ರೇಮ ಬೆಳೆಸಿಕೊಳ್ಳಿ ಎಂದು ಕರೆ ನೀಡುತ್ತಾ, ಸಂಸ್ಥೆಯ ಬೆಳ್ಳಿ ಹಬ್ಬದ ಈ ಸುಸಂದರ್ಭದಲ್ಲಿ ನಮ್ಮ ಸಂಸ್ಥೆಯಲ್ಲಿ ವ್ಯಾಸಂಗಮಾಡುತ್ತಿರುವ ವೀರಯೋಧರ ಮಕ್ಕಳಿಗೆ ಕಲಿಕಾ ಶುಲ್ಕದಲ್ಲಿ ಸಂಸ್ಥೆಯ ವತಿಯಿಂದ ವಿಶೇಷ ರಿಯಾಯಿತಿಯನ್ನು ನೀಡುವುದಾಗಿ ಘೋಷಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ಅಭಿಮಾನದ ದ್ಯೋತಕವಾಗಿ ನಡೆಸಿದ ಹಲವು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ವೀರ ಯೋಧರಾದ ಶ್ರೀ ಅಶೋಕ ಹೆಗಡೆ, ಶ್ರೀ ನಾಗೇಶ ಪಟಗಾರ ಇವರನ್ನು ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಟ್ರಸ್ಟಿಗಳಾದ ರಮೇಶ ಪ್ರಭು, ಡಾ. ವೆಂಕಟೇಶ ಶಾನಭಾಗ, ಗಜಾನನ ಕಿಣಿ, ನಿವೃತ್ತ ಮುಖ್ಯಾಧ್ಯಾಪಕರಾದ ಎಂ.ಎಂ.ಹೆಗಡೆ, ಎಲ್ಲಾ ಅಂಗ ಸಂಸ್ಥೆಗಳ ಮುಖ್ಯಸ್ಥರು, ಶೈಕ್ಷಣಿಕ ಸಲಹೆಗಾರರು, ವೀರಯೋಧರು, ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳ ಪಾಲಕರು, ಶಾಲಾ ವಾಹನ ಚಾಲಕ-ನಿರ್ವಾಹಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಬೆಳ್ಳಿ ಹಬ್ಬದ ಸಂದರ್ಭದ ಪ್ರಯುಕ್ತ ಈ ವರ್ಷದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಆಚರಣೆಯನ್ನು ಕೊಂಕಣದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಡ್ರೋಣ್ ಕ್ಯಾಮರಾದ ಮೂಲಕ ಸೆರೆ ಹಿಡಿದಿದ್ದು ವಿಶಿಷ್ಟವಾಗಿತ್ತು.