ಕಾರವಾರ: ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಹೆಸರಿನಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಕೆಲವರು ಅನಧಿಕೃತವಾಗಿ ಚಿಟ್ಟಾಣಿ ಕಲಾಕೇಂದ್ರದ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಪುತ್ರ ಸುಬ್ರಹ್ಮಣ್ಯ ಚಿಟ್ಟಾಣಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಸರ್ಕಾರದಿಂದ ಕಲಾಕೇಂದ್ರಕ್ಕೆ ಬಂದ ₹10 ಲಕ್ಷ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ತಾಯಿ ಸುಶೀಲಾ ಹಾಗೂ ಸಹೋದರ ನರಸಿಂಹ ಅವರ ತಲೆಕೆಡಿಸಲಾಗಿದೆ. ಇನ್ನೊಬ್ಬ ಸಹೋದರ ನಾರಾಯಣ, ತನ್ನ ಸ್ವಾರ್ಥಕ್ಕಾಗಿ ತಂದೆಯವರ ಹೆಸರು ಕೆಡಿಸುತ್ತಿದ್ದಾರೆ ಎಂದು ದೂರಿದರು.

ಟ್ರಸ್ಟ್‌ವೊಂದನ್ನು ಸ್ಥಾಪಿಸಿ, ಪದ್ಮಶ್ರೀ ಚಿಟ್ಟಾಣಿ ಯಕ್ಷಗಾನ ತರಬೇತಿ ಮತ್ತು ಸಂಶೋಧನಾ ಕೇಂದ್ರವನ್ನು ನಿರ್ಮಾಣ ಮಾಡಲು ತಂದೆ ಕನಸು ಕಂಡಿದ್ದರು. ಅದರಂತೆ, ಸಚಿವ ಆರ್.ವಿ.ದೇಶಪಾಂಡೆ, ಬಿಜೆಪಿಯ ಮುಖಂಡ ಪ್ರಮೋದ ಹೆಗಡೆ, ಕಾಂಗ್ರೆಸ್ ಮುಖಂಡ ಮಂಕಾಳ ವೈದ್ಯ ಹಾಗೂ ಕೆನರಾ ಬ್ಯಾಂಕ್‌ ಇದಕ್ಕಾಗಿ ಹಣದ ನೆರವು ನೀಡಿದ್ದರು. ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹಾಗೂ ಬಂಗಾರಮಕ್ಕಿಯ ಮಾರುತಿ ಗುರೂಜಿ ನೇತೃತ್ವದಲ್ಲಿ ಕಲಾಕೇಂದ್ರಕ್ಕೆ ಅಡಿಗಲ್ಲನ್ನೂ ಹಾಕಲಾಗಿತ್ತು. ಇದರ ನಡುವೆ, ಮನೆಯ ಎದುರೇ ಕಟ್ಟಡವೊಂದು ತಲೆ ಎತ್ತಲಾರಂಭಿಸಿತ್ತು. ಇದನ್ನು ಕಂಡು ಬೇಸರಗೊಂಡ ತಂದೆಯವರು ದಿನೇ ದಿನೇ ಕುಸಿಯತೊಡಗಿದ್ದರು. ಬಳಿಕ, ಅಧಿಕೃತವಾಗಿ ಅಡಿಗಲ್ಲು ಹಾಕಿದ್ದ ಕಲಾಕೇಂದ್ರದಲ್ಲಿ ಅವರ ಪಾರ್ಥೀವ ಶರೀರವನ್ನು ದಹಿಸಲು ಮಾತ್ರ ಸಾಧ್ಯವಾಯಿತು. ಆದರೆ, ಅವರ ಕನಸನ್ನು ಈಡೇರಿಸಲು ಸಾಧ್ಯವಾಗಿರಲಿಲ್ಲ. ಟ್ರಸ್ಟ್‌ಗೆ ಸೇರಿದ ಸ್ಥಳ ಇದ್ದರೂ ಮನೆಯವರೇ ತಂದೆಯ ಕನಸಿಗೆ ಅಡ್ಡಗಾಲಾಗಿದ್ದು ಬೇಸರ ತಂದಿದೆ ಎಂದು ದೂರಿದರು.

RELATED ARTICLES  ಹೆಗಡೆ A ತಂಡಕ್ಕೆ ಒಲಿದ ವಿಶ್ವವಿದ್ಯಾ ಟ್ರೋಫಿ-2022

ಚಿಟ್ಟಾಣಿ ಅಭಿಮಾನಿಗಳು ಹಾಗೂ ಸರ್ಕಾರ ತಂದೆಯ ನೆನಪಿಗಾಗಿ ನೀಡಿದ್ದ ಹಣವನ್ನೂ ಇಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಈ ಅಕ್ರಮ ಕಟ್ಟಡದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದೇನೆ. ಸಾರ್ವಜನಿಕರು ಇದರ ನಿರ್ಮಾಣಕ್ಕೆ ಯಾವುದೇ ದೇಣಿಗೆ ನೀಡಬಾರದು ಎಂದು ಅವರು ಮನವಿ ಮಾಡಿದರು.

RELATED ARTICLES  ಕರಾವಳಿ ಉತ್ಸವಕ್ಕೆ ನಡೆದಿದೆ ಸಿದ್ಧತೆ: ಕಾರವಾರದಲ್ಲಿ ಡಿ.8, 9 ಹಾಗೂ 10ರಂದು ಕರಾವಳಿ ಉತ್ಸವ.

ಪ್ರಮುಖರಾದ ಕಾರ್ತಿಕ ಚಿಟ್ಟಾಣಿ, ಸುಬ್ರಾಯ ಹೆಗಡೆ, ವೆಂಕಟರಮಣ ಹೆಗಡೆ, ರಾಮಚಂದ್ರ ಭಟ್ಟ ಇದ್ದರು.