ಮೈಸೂರು, -ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸುತ್ತಿರುವುದರಿಂದ ಪ್ರವಾಹದ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳನ್ನು ಮೂರು ತಂಡಗಳಾಗಿ ವಿಂಗಡಿಸಿ ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಎಚ್.ಡಿ.ಕೋಟೆ ಬಳಿ ಇರುವ ಕಬಿನಿ ಜಲಾಶಯದ ಬಳಿ ಒಂದು ತಂಡ, ಕಪಿಲಾ ನದಿ ಹರಿಯುತ್ತಿರು ನಂಜನಗೂಡು ಬಳಿ ಮತ್ತೊಂದು ತಂಡ, 3ನೇ ತಂಡ ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ. ಬೋಟ್, ಜೀವರಕ್ಷಕ ಜಾಕೆಟ್‍ಗಳು ಸೇರಿದಂತೆ ರಕ್ಷಣೆಗೆ ಅಗತ್ಯವಾದ ಸಾಮಗ್ರಿಗಳನ್ನು ಹೊಂದಿದ್ದು, ಜನರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.