ನವದೆಹಲಿ : ಬಹು ದಿನಗಳ ಅಂಗಾಂಗ ವೈಫಲ್ಯದಿಂದ ಗುರುವಾರ ಸಂಜೆ ಅಸ್ತಂಗತರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ಸಂಸ್ಕಾರ ಇಂದು ಸಂಜೆ 5 ಗಂಟೆಗೆ ಯಮುನಾ ನದಿ ತೀರದಲ್ಲಿ ಬ್ರಾಹ್ಮಣ ಸಮುದಾಯದ ವಿಧಿಗಳ ಪ್ರಕಾರ ನೆರವೇರಿತು.ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಕೃಷ್ಣ ಮೆನನ್ ನಿವಾಸದಲ್ಲಿ ಇರಿಸಲಾಗಿತ್ತು, ಬೆಳಗ್ಗೆ 9 ಗಂಟೆಗೆ ಬಿಜೆಪಿ ಕಚೇರಿಗೆ ಸ್ಥಳಾಂತರಿಸಿ, ಸಾವರ್ಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೇರಿ ಹಲವು ಗಣ್ಯರು ಅಟಲ್ ಅವರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದಿದ್ದರು.
ಅಜಾತ ಶತ್ರು, ಧೀಮಂತ ನಾಯಕ, ಕವಿ ಹೃದಯದ ಸರಳ, ಸಜ್ಜನ ರಾಜಕಾರಣಿ, ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯಮುನಾ ನದಿಯ ದಡದಲ್ಲಿ ಪಂಚಭೂತಗಳಲ್ಲಿ ಲೀನರಾದರು.
ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವಾಧಾರಗಳೊಂದಿಗೆ ನೆರವೇರಿತು. ಹಿಂದೂ ಬ್ರಾಹ್ಮಣ ಸಂಪ್ರದಾಯದಂತೆ ಪುರೋಹಿತರು ಹಾಗೂ ಕುಟುಂಬ ಸದಸ್ಯರು ಅಂತಿಮ ವಿಧಿ ವಿಧಾನ ಕಾರ್ಯಗಳನ್ನು ನೆರವೇರಿಸಿದರು. 21 ಬಾರಿ ಕುಶಾಲ ತೋಪು ಸಿಡಿತ ಹಾಗೂ ಅಟಲ್ ಬಿಹಾರಿ ವಾಜಪೇಯಿ ಕೀ ಜೈ ಘೋಷಣೆ ನಡುವೆ ವಾಜಪೇಯಿ ಅವರ ದತ್ತುಪುತ್ರಿ ನಮಿತಾ ಭಟ್ಟಾಚಾರ್ಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಸಾರ್ಕ್ ರಾಷ್ಟ್ರಗಳ ಗಣ್ಯರು , ಕೇಂದ್ರ ಸಂಪುಟದ ಸಚಿವರು, ಎಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ನೂರಾರು ಮಂದಿ ಅಂತ್ಯಕ್ರಿಯೆ ಸ್ಥಳದಲ್ಲಿ ಹಾಜರಿದ್ದು, ಅಗಲಿದ ಹಿರಿಯ ನಾಯಕನಿಗೆ ಅಂತಿಮ ವಿದಾಯ ಹೇಳಿದರು.