ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಪ್ರವಾಹ ಪರಿಹಾರವಾಗಿ 500 ಕೋಟಿ ಫೋಷಿಸಿದರು. ಪ್ರಧಾನಿ ವೈಮಾನಿಕ ಸಮೀಕ್ಷೆಗೆ ತೆರಳಿದ ಕೆಲವೇ ಕ್ಷಣಗಳಲ್ಲಿ ಭಾರೀ ಮಳೆಯ ಕಾರಣ ಹೆಲಿಕಾಪ್ಟರ್ ಹಿಂದಕ್ಕೆ ಕರೆಸಿಕೊಳ್ಳಲಾಗಿತ್ತು.
ನಂತರದಲ್ಲಿ ಕೇರಳದ ಸಿಎಂ ಪಿಣರಾಯಿ ವಿಜಯನ್ ಅವರೊಂದಿಗೆ ತುರ್ತು ಸಭೆ ನಡೆಸಿದ ಪ್ರಧಾನಿ ಮೋದಿ, ಮಧ್ಯಂತರ ಪರಿಹಾರವಾಗಿ 500 ಕೋಟಿ ಘೋಷಿಸಿದರು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕಳೆದ ಭಾನುವಾರ ಕೇರಳಕ್ಕೆ ಭೇಟಿ ನೀಡಿ ಪ್ರವಾಹ ಪರಿಹಾರವಾಗಿ 100 ಕೋಟಿ ಘೋಷಿಸಿದ್ದರು.
ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೆರೆಯಲ್ಲಿ ಸಾವಿಗೀಡಾದ ವ್ಯಕ್ತಿಯ ಕುಟುಂಬಕ್ಕೆ 2 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡಿರುವ ಪ್ರತಿ ವ್ಯಕ್ತಿಗೆ 50 ಸಾವಿರ ಬಿಡುಗಡೆಯಾಗಲಿದೆ. ಪ್ರವಾಹದಿಂದ ಸುಮಾರು 82 ಸಾವಿರ ಜನರು ಸ್ಥಳಾಂತರಗೊಂಡಿದ್ದಾರೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಪ್ರವಾಹದಿಂದ 19,512 ಕೋಟಿ ನಷ್ಟ ಉಂಟಾಗಿರುವುದಾಗಿ ಪಿಣರಾಯಿ ವಿಜಯನ್ ಪ್ರಧಾನಿಗೆ ವಿವರಿಸಿದ್ದಾರೆ. ಇನ್ನು ಎರ್ನಾಕುಲಂ ಮತ್ತು ಇಡುಕ್ಕು ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಹಿಂಪಡೆಯಲಾಗಿದೆ ಎಂದು ತಿಳಿದು ಬಂದಿದೆ.