ಇದೊಂದು ಆಫ್ರಿಕಾ ಖಂಡದ  ವಿಚಿತ್ರವಾದ ಜನಪದ ಕಥೆ. ಕಾಡಿನ ಜನಾಂಗಕ್ಕೊಬ್ಬ ನಾಯಕ. ಅವನಿಗೆ ಮಾರ್ಗದರ್ಶನ ಮಾಡಲು ಒಬ್ಬ ಪುರೋಹಿತನಂತಿದ್ದ ಧರ್ಮಗುರು. ಆ ಧರ್ಮಗುರುವಿಗೆ ವಿಪರೀತವಾಗಿ ಮಾತನಾಡುವ ಚಾಳಿ. ಬಾಯಿ ತೆರೆದರೆ ಮುಚ್ಚುವವನೇ ಅಲ್ಲ. ನಾಯಕ ಒಂದು ಪ್ರಶ್ನೆ ಕೇಳಿದರೆ ಎರಡು ತಾಸು ಬಿಟ್ಟೂ ಬಿಡದೆ ಉತ್ತರ ಕೊಡುತ್ತಿದ್ದ. ಹೆದರಿಕೆಯಿಂದ ನಾಯಕ ಪ್ರಶ್ನೆ ಕೇಳುವುದನ್ನೇ ತಪ್ಪಿಸಿಕೊಳ್ಳುತ್ತಿದ್ದ. ಹೇಗಾದರೂ ಮಾಡಿ ಈ ಪುರೋಹಿತನ ಬಾಯಿ ಮುಚ್ಚಿಸಬೇಕೆಂದು ಯೋಚಿಸುತ್ತಿದ್ದ ನಾಯಕ.

ಒಂದು ದಿನ ನಾಯಕ ಕಾಡಿನ ಅಂಚಿಗೆ ಒಂದು ದೊಡ್ಡ ಮುತ್ತುಗದ ಮರದ ಕೆಳಗೆ ಮಲಗಿದ್ದ. ಎಚ್ಚರಾದ ಮೇಲೆ ಸುತ್ತಮುತ್ತ ನೋಡಿದ. ಅಲ್ಲಿ ಎಲ್ಲೆಡೆಗೂ ಮರದ ಎಲೆಗಳು ಬಿದ್ದಿದ್ದವು. ಅವುಗಳನ್ನು ಎತ್ತಿ ನೋಡಿದಾಗ ಭಾರಿ ಆಶ್ಚರ್ಯವಾಯಿತು. ಪ್ರತಿಯೊಂದು ಎಲೆಯ ಮಧ್ಯೆ ಒಂದು ತೂತು. ಬರೀ ತೂತಲ್ಲ, ಚಿತ್ರವಿಚಿತ್ರ ಆಕೃತಿಗಳು. ತಲೆ ಎತ್ತಿ ನೋಡಿದ. ಮರದ ಎಲೆಗಳ ಮಧ್ಯದಲ್ಲಿ ಇದೇ ರೀತಿ ಚಿತ್ರದ ತೂತುಗಳು. ತನ್ನ ಜೊತೆಯವರಿಗೆ ಈ ವಿಚಿತ್ರದ ಬಗ್ಗೆ ಕೇಳಿದ. ಅವರು ಅಲ್ಲಲ್ಲಿ ತನಿಖೆ ಮಾಡಿ ಒಬ್ಬ ಕುಂಟ ಹುಡುಗನನ್ನು ಕರೆತಂದರು.
ಅವನು ಅಸಾಮಾನ್ಯ ಗುರಿಕಾರ. ಊರಿನ ಹುಡುಗ ಹುಡುಗಿಯರು ಆತನನ್ನು ಕರೆದುಕೊಂಡು ಮರದ ಬಳಿಗೆ ಬರುವರು. ಅವರು ಅಪೇಕ್ಷಿಸಿದಂತೆ ಆತ ಸಣ್ಣ ಸಣ್ಣ ಹರಳುಗಳನ್ನು ಗುರಿಯಿಟ್ಟು ಎಲೆಗಳಿಗೆ ಹೊಡೆಯುವನು. ಅದು ಹೇಗೆಂದರೆ ಕಲ್ಲು ಬಡಿದೊಡನೆ ಎಲೆಯ ಮಧ್ಯದಲ್ಲಿ ಅವರು ಅಪೇಕ್ಷಿಸಿದ – ನಾಯಿ, ಸಿಂಹ, ಜಿಂಕೆ ಇಂಥ ಚಿತ್ರದ ತೂತುಗಳಾಗುತ್ತಿದ್ದವು. ಅವುಗಳನ್ನು ನೋಡಿ ಮಕ್ಕಳು ಸಂತೋಷಪಡುತ್ತಿದ್ದರು. ನಾಯಕನೂ ಅವನಿಗೆ ಕೆಲವು ಕಲ್ಲು ಎಸೆಯಲು ಹೇಳಿದ.
ಕುಂಟ ಹುಡುಗ ನಾಯಕ ಹೇಳಿದ ಚಿತ್ರದಂತಿರುವ ತೂತುಗಳಾಗುವಂತೆ ಹೊಡೆದ. ತಕ್ಷಣವೇ ನಾಯಕನಿಗೆ ಹೊಳೆಯಿತು, ಈ ಹುಡುಗನಿಂದ ಪುರೋಹಿತನ ಬಾಯಿ ಮುಚ್ಚಿಸಬಹದು. ಅವನಿಗೆ ತನ್ನ ಕಷ್ಟ ಹೇಳಿಕೊಂಡ. ಹುಡುಗ ಹೇಳಿದ, ‘ಪ್ರಭು, ನನಗೆ ಒಂದು ಬುಟ್ಟಿಯಷ್ಟು ಒಣಗಿದ ಕುರಿ ಹಿಕ್ಕೆ ಕೊಟ್ಟರೆ ಇದನ್ನು ಮಾಡುತ್ತೇನೆ’. ನಾಯಕ ಒಪ್ಪಿ ಅವನನ್ನು ತನ್ನ ಮನೆಗೆ ಕರೆದೊಯ್ದ. ಮರುದಿನ ಪುರೋಹಿತನನ್ನು ಕರೆದು ಮುಂದೆ ಕುಳ್ಳಿರಿಸಿಕೊಂಡ. ನಾಯಕನ ಹಿಂದೆ ಒಂದು ಪರದೆಯ ಬದಿಯಲ್ಲಿ ಹುಡುಗ ಕುಳಿತುಕೊಂಡ.
ನಾಯಕ ಪ್ರಶ್ನೆ ಕೇಳಿದೊಡನೆ ಪುರೋಹಿತ ಮಾತನಾಡಲು ಪ್ರಾರಂಭಿಸಿದ. ಹುಡುಗ ಕುಳಿತಲ್ಲಿಂದ ನೇರವಾಗಿ ಪುರೋಹಿತನ ತೆರೆದ ಬಾಯಿಯಲ್ಲಿ ಹಿಕ್ಕೆಗಳು ಬೀಳುವಂತೆ ಎಸೆಯತೊಡಗಿದ. ಪುರೋಹಿತನಿಗೆ ಅದೇನೆಂದು ತಿಳಿಯದೇ ನುಂಗುತ್ತ ಬಂದ. ಹುಡುಗ ಎಸೆತದ ವೇಗವನ್ನು ಹೆಚ್ಚಿಸಿದ. ಕ್ಷಣಾರ್ಧದಲ್ಲಿ ಪುರೋಹಿತನ ಬಾಯಿ ಹಿಕ್ಕೆಗಳಿಂದ ತುಂಬಿ ಮಾತನಾಡುವುದು ಅಸಾಧ್ಯವಾಯಿತು. ಅವು ಎಲ್ಲಿಂದ, ಹೇಗೆ ಬರುತ್ತವೆ ಎಂಬುದೇ ತಿಳಿಯುತ್ತಿರಲಿಲ್ಲ.
ನಂತರ ಬಾಯಿಯಿಂದ ಹೊರಗೆ ತೆಗೆದು, ಹಿಕ್ಕೆಗಳನ್ನು ನೋಡಿ ನಾಚಿಕೆಯಿಂದ ಓಡಿಹೋದ. ನಂತರ ಪ್ರತಿಬಾರಿ ಮಾತನಾಡುವಾಗ ಹೆಚ್ಚು ಬಾಯಿ ತೆರೆಯದೆ ಮಿತವಾಗಿ ಮಾತನಾಡತೊಡಗಿದ. ನಾಯಕ ಹುಡುಗನಿಗೆ ನಾಲ್ಕು ಗ್ರಾಮಗಳನ್ನು ನೀಡಿ ಅವನನ್ನೇ ನಾಯಕನನ್ನಾಗಿ ಮಾಡಿದ. ಇಲ್ಲಿ ಎರಡು ಸಂದೇಶಗಳು, ಯಾವುದೇ ಒಂದು ಕಲೆ, ಅದು ಕಲ್ಲು ಹೊಡೆಯುವುದೇ ಆಗಿರಬಹುದು, ಅದರಲ್ಲಿ ತುಂಬ ಪರಿಣತಿ ಹೊಂದಿದ್ದರೆ ಬದುಕಿನಲ್ಲಿ ಯಶ ದೊರೆಯುತ್ತದೆ. ಎರಡನೆಯದು, ನೀವು ಎಷ್ಟೇ ದೊಡ್ಡ ವಾಗ್ಮಿಯಾಗಿದ್ದರೂ, ಜ್ಞಾನಿಯಾಗಿದ್ದರೂ ಮಾತು ಮಿತವಾಗಿದ್ದರೆ ಸುಖ ಕೊಡುತ್ತದೆ. ಅದು ಅತಿಯಾದರೆ ಬಾಯಿ ಮುಚ್ಚಿಸಲು ಜನ ಉಪಾಯಗಳನ್ನು ಮಾಡಬೇಕಾಗುತ್ತದೆ. ಆ ಉಪಾಯಗಳು ಅಷ್ಟು ಹಿತವನ್ನು ನೀಡಲಿಕ್ಕಿಲ್ಲ.

RELATED ARTICLES  ನೀರು ತರಲು ಹೋದ ಮಹಿಳೆ ಬಾವಿಗೆ ಬಿದ್ದಳು..!