ಕೇರಳ: ಅತಿವೃಷ್ಟಿಯಿಂದಾಗಿ ತತ್ತರಿಸಿ ಹೋಗಿರುವ ಕೇರಳ ರಾಜ್ಯಕ್ಕೆ ಅರಬ್ ರಾಷ್ಟ್ರ 700 ಕೋಟಿ ರೂ.ಗಳ ನೆರವು ನೀಡುವುದಾಗಿ ಘೋಷಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಈಗಾಗಲೇ ವಿವಿಧ ರಾಜ್ಯಗಳು ಆಹಾರ, ಕುಡಿವ ನೀರು, ಬಟ್ಟೆ ಸೇರಿದಂತೆ ಹಣಕಾಸಿನ ನೆರವು ನೀಡಿದ್ದು, ಸೆಲಬ್ರಿಟಿಗಳು ಹಾಗೂ ಗಣ್ಯರೂ ಸಹ ಸಾಕಷ್ಟು ನೆರವು ನೀಡುತ್ತಿದ್ದಾರೆ. ಈಗ ಅರಬ್ ರಾಷ್ಟ್ರ(ಯುಎಇ-ಯುನೈಟೆಡ್ ಅರಬ್ ಎಮರೈಟ್ಸ್) ದಿಂದ 700 ಕೋಟಿ ರೂ. ಪರಿಹಾರ ನೀಡಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ಈಗಾಗಲೇ ಸೇನಾ ಎಂಜಿನಿಯರ್ಗಳು ಪ್ರವಾಹ ಪರಿಹಾರ ನಿರ್ವಹಣಾ ಕಾರ್ಯಕ್ಕೆ ನಿಂತಿದ್ದು, ಕ್ಯಾಪ್ಟನ್ ಅಮನ್ ಠಾಕೂರ್ ಎರ್ನಾಕುಲಂ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ತಂಡ ಸುಮಾರು 2032 ನಾಗರಿಕರನ್ನು ಇದುವರೆಗೂ ರಕ್ಷಿಸಿದೆ, ಭಾರತೀಯ ಸೇನೆ ಇದುವರೆಗೂ 10629 ಮಂದಿಯನ್ನು ರಕ್ಷಿಸಿ, 49 ಸ್ಥಳಗಳಿಗೆ ಸಂಪರ್ಕ ಕಲ್ಪಿಸಿದ್ದಾರೆ ಎಂದು ಹೇಳಿದರು.
ಕೇರಳದಲ್ಲಿ ಪ್ರವಾಹದಿಂದ ಈವರೆಗೆ 20000 ಕೋಟಿ ರೂ.ಗಳಿಗೂ ಹೆಚ್ಚಿನ ಹಾನಿ ಉಂಟಾಗಿದೆ. ಕೇಂದ್ರ ಸರ್ಕಾರವು 500 ಕೋಟಿ ಹಣವನ್ನು ಕೇರಳಕ್ಕಾಗಿ ಬಿಡುಗಡೆ ಮಾಡಿದೆ. ಜೊತೆಗೆ ಕೇರಳ ಪ್ರವಾಹವನ್ನು ‘ಗಂಭೀರ ಸ್ವರೂಪದ ಪ್ರಾಕೃತಿಕ ವಿಕೋಪ’ ಎಂದು ಘೋಷಿಸಿದೆ. ಆದರೆ ಯುಎಇಯು ಕೇಂದ್ರ ಸರ್ಕಾರ ನೀಡಿದ ಆರ್ಥಿಕ ನೆರವಿಗಿಂತಲೂ ದೊಡ್ಡ ಮೊತ್ತದ ಆರ್ಥಿಕ ನೆರವನ್ನು ಘೋಷಿಸಿದೆ.
ಮಾಹಿತಿ: ಜಿ.ನ್ಯೂಸ್