ಬೆಂಗಳೂರು : ಕೊಡಗಿನಲ್ಲಾದ ಪ್ರವಾಹದಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಇನ್ನೂ 10ದಿನಗಳಲ್ಲಿ ಮನೆ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ವರುಣನ ಕೋಪ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಜನರಿಗೆ ಕುಡಿಯುವ ನೀರಿಗೂ ತೊಂದರೆ ಉಂಟಾಗಿದೆ ಜನರು ಮನೆಯನ್ನು ಕಳೆದುಕೊಂಡಿದ್ದಾರೆ . ಹೀಗಾಗಿ ಕೊಡಗಿಗೆ ಆಗಿರುವ ಅನಾಹುತದ ಬಗ್ಗೆ ರಾಜ್ಯ ಸರ್ಕಾರ ಅಧಿಕಾರಿಗಳೊಂದಿಗೆ ಸಿಎಂ ಚರ್ಚಿಸಿದ್ದಾರೆ.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಎಂ, ಸುಮಾರು ಎರಡು ಸಾವಿರ ತಾತ್ಕಾಲಿಕ ಮನೆ ನಿರ್ಮಾಣ ಮಾಡಲಾಗುತ್ತಿದೆ ಹಾಗೂ ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳಲು ಇಬ್ಬರು ಐಎಎಸ್ ಅಧಿಕಾರಿಗಳನ್ನು ಮೇಲುಸ್ತುವಾರಿಯಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೊಡಗಿನಲ್ಲಿ 845 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 773 ಮನೆಗಳು ಭಾಗಶಃ ಹಾನಿಯಾಗಿವೆ. 123 ಕಿ.ಮೀ. ರಸ್ತೆ ಹಾಳಾಗಿದ್ದು 58 ಸೇತುವೆ, 28 ಸರ್ಕಾರಿ ಕಟ್ಟಡಗಳು ಹಾಗೂ 3800 ವಿದ್ಯುತ್ ಕಂಬಗಳು ಹಾನಿಗೊಳಗಾಗಿವೆ. ಸದ್ಯ ಸಂಕಷ್ಟದಲ್ಲಿದ್ದ ಎಲ್ಲರನ್ನೂ ರಕ್ಷಿಸಲಾಗಿದೆ. ಪುನರ್ವಸತಿ ಕಾರ್ಯ ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಹೇಳಿದ್ದಾರೆ.
ಕೊಡಗಿನಲ್ಲಿ ರಸ್ತೆ, ಮನೆ ಸೇರಿದಂತೆ ಸುಮಾರು 2 ರಿಂದ 3 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ. ಅಡಿಕೆ, ಕಾಫಿ, ಮೆಣಸಿನ ಕಾಳು ಸೇರಿ ಸಾಕಷ್ಟು ಬೆಳೆ ನಷ್ಟವಾಗಿವೆ. ನಿರಾಶ್ರಿತರಾಗಿರುವ ಪ್ರತಿ ಕುಟುಂಬಕ್ಕೂ ವಸ್ತುಗಳನ್ನು ಖರೀದಿಸಲು ಸರ್ಕಾರದಿಂದ 3800 ರೂ. ಪರಿಹಾರ ನೀಡಲಾಗುವುದು ಎಂದಿದ್ದಾರೆ.