ಹ್ಯಾಂಡ್ ಬಾಲ್ ಜಿಲ್ಲೆಯಲ್ಲಿ ಮೊದಲ ಪ್ರಯೋಗ
ಕುಮಟಾ: ಕಾರವಾರ ಶೈಕ್ಷಣಿಕ ಜಿಲ್ಲೆಗೆ ಮೊಟ್ಟಮೊದಲ ಬಾರಿ ಶಿಕ್ಷಣ ಇಲಾಖೆಯ ಕ್ರೀಡಾ ವಿಭಾಗಕ್ಕೆ ಹ್ಯಾಂಡ್ ಬಾಲ್ ಕ್ರೀಡೆಯನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಇಲ್ಲಿಯ ದೈಹಿಕ ಶಿಕ್ಷಕರ ಸಂಘದಡಿಯಲ್ಲಿ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ವಿಶೇಷ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯ್ಕ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಜಿಲ್ಲೆಗೆ ಮೊದಲಿಗರಾದ ನಾವು ಇತರ ಜಿಲ್ಲೆಗಳಲ್ಲಿ ಜನಪ್ರಿಯವಾದ ಈ ಆಟವನ್ನು ತಾಲ್ಲೂಕಿನಲ್ಲಿ ಅಧಿಕೃತವಾಗಿ ಪರಿಚಯಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸಲು ಇಲ್ಲಿಯ ದೈಹಿಕ ಶಿಕ್ಷಕರು ಪ್ರಯತ್ನಿಸುತ್ತಿರುವುದು ಅತಿ ಶ್ಲಾಘನೀಯವಾದುದೆಂದು ಅಭಿಪ್ರಾಯಪಟ್ಟರು. ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜಿ.ನಾಯಕ ಶಾಲೆಗಳಲ್ಲಿ ಆಟೋಟಗಳಿಗೆ ತಕ್ಕುದಾದ ಸಮಯ ನಿಗದಿಪಡಿಸುವಂತೆ ಮುಖ್ಯ ಶಿಕ್ಷಕರಿಗೆ ಆದೇಶಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ವಿನಂತಿಸಿಕೊಂಡರು. ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು ಪೂರ್ಣ ಅಂಕಗಳಿಸಿದ ವಿದ್ಯಾರ್ಥಿಗಳು ಪರಿಪೂರ್ಣತೆ ಹೊಂದಬೇಕಾದರೆ ದೈಹಿಕ ಶಿಕ್ಷಣದ ಕಲಿಕೆ ಕಡ್ಡಾಯವಾಗಬೇಕು. ಅಂದಾಗ ಮಾತ್ರ ದೇಶ ಕ್ರೀಡೆಯಲ್ಲಿ ಮುಂಚೂಣಿಗೆ ಬರಲು ಸಾಧ್ಯ ಎಂದರು. ಸಂಪನ್ಮೂಲ ಕ್ರೀಡಾ ತಜ್ಞರಾಗಿ ಹಾವೇರಿ ಜಿಲ್ಲೆಯಿಂದ ಆಗಮಿಸಿದ ಶಂಕರ ದಡ್ಡಿ ಮತ್ತು ಪ್ರವೀತಾ ಚೂರಿ ತಾಲೂಕಿನ ಎಲ್ಲ ಪ್ರೌಢಶಾಲೆಗಳಿಂದ ಆಗಮಿಸಿದ ಶಿಕ್ಷಕರಿಗೆ ಪ್ರಾತ್ಯಕ್ಷಿಕ ತರಬೇತಿ ನೀಡಿದರು. ಪ್ರಾರಂಭದಲ್ಲಿ ಪೂರ್ಣಿಮಾ ಮತ್ತು ಸಂಗಡಿಗರು ಪ್ರಾರ್ಥಿಸಿ ಸ್ವಾಗತಗೀತೆ ಹಾಡಿದರು. ಶಿಕ್ಷಕ ಕಿರಣ ಪ್ರಭು ಸ್ವಾಗತಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್.ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ವಿಷ್ಣು ಭಟ್ಟ ನಿರೂಪಿಸಿದರು. ವೇದದಿಕೆಯಲ್ಲಿ ಸಂಘದ ಕಾರ್ಯದರ್ಶಿ ಎಂ.ಆಯ್.ಭಟ್ಟ, ಇಲಾಖಾ ಅಧಿಕಾರಿ ಅಶೋಕ ರಾಯ್ಕರ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಎಲ್.ಎನ್.ಅಂಬಿಗ ಕಾರ್ಯಕ್ರಮ ಸಂಘಟಿಸಿದರು. ಇದೇ ಸಂದರ್ಭದಲ್ಲಿ ಅನಾರೋಗ್ಯದ ನಿಮಿತ್ತ ರಾಜೀನಾಮೆ ನೀಡಿ ಅಕಾಲಿಕವಾಗಿ ನಿಧನರಾದ ಶಿಕ್ಷಕ ಜಿ.ಎಂ.ಭಟ್ಟ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

RELATED ARTICLES  ಕುಮಟಾಕ್ಕೆ ಬರಲಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳ ಮೌಲ್ಯ ಮಾಪನ ಕೇಂದ್ರ: ಕೇಳಿ ಬಂತು ಒತ್ತಾಯ