ಹೊನ್ನಾವರ: ಭಟ್ಕಳ ಬಸ್ ನಿಲ್ದಾಣದ ಬಳಿಕ ಹೊನ್ನಾವರದ ಬಸ್ ನಿಲ್ದಾಣವೂ ಕುಸಿದು ಬೀಳುವ ಸ್ಥಿತಿ ಎದುರಾದಂತೆ ಕಾಣುತ್ತಿದೆ.ಇದು ಜನತೆಯ ಆತಂಕಕ್ಕೆ ಕಾರಣವಾಗಿದೆ.
ಶನಿವಾರ ಮಧ್ಯಾಹ್ನದ ಸಮಯದಲ್ಲಿ ಬಸ್ ನಿಲ್ದಾಣದ ಬಲಬದಿಯ ಗೋಡೆ ಬಿರುಕೊಂಡ ಪರಿಣಾಮ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಸದಾ ಸುದ್ದಿಯಲ್ಲಿರುತ್ತಿದ್ದ ಹೊನ್ನಾವರ ಬಸ್ ನಿಲ್ದಾಣ ಇದೀಗ ಮತ್ತೊಂದು ಅವಘಡಕ್ಕೆ ಕಾರಣವಾಗುವುದರಿಂದ ಸ್ವಲ್ಪದರಲ್ಲೇ ಬಚಾವಾಗಿದೆ. ಪ್ರತಿನಿತ್ಯ ರಾಜ್ಯ, ಹೊರರಾಜ್ಯದಿಂದ ನೂರಾರು ಸಂಖ್ಯೆಯ ಸಾರಿಗೆ ಬಸ್ಸುಗಳು ಇಲ್ಲಿನ ಬಸ್ ನಿಲ್ದಾಣಕ್ಕೆ ಬರುತ್ತವೆ. ಸಾವಿರಾರು ಸಂಖ್ಯೆಯ ಸಾರ್ವಜನಿಕರು, ವಿದ್ಯಾರ್ಥಿಗಳು ಭೇಟಿ ನೀಡುವ ಈ ನಿಲ್ದಾಣವು ಸುರಕ್ಷಿತವಾಗಿಲ್ಲ ಎನ್ನುವುದಕ್ಕೆ ಶನಿವಾರ ನಡೆದ ಘಟನೆಯೇ ಸಾಕ್ಷಿಯಾಗಿದೆ.
ಬಸ್‍ನಿಲ್ದಾಣದ ಬಲಬದಿಯ ಗೋಡೆಯ ಅರ್ಧ ಭಾಗ ಕುಸಿದು ಬಿದ್ದು, ಆ ಭಾಗದ ಗೋಡೆ ಬಿರುಕು ಬಿಟ್ಟಿತ್ತು. ತಕ್ಷಣ ಸ್ಥಳಕ್ಕಾಗಿಮಿಸಿದ ಹೊನ್ನಾವರ ಪೋಲಿಸರು ಕ್ರಮವಾಗಿ ಜನರ ಸುರಕ್ಷತೆಯ ಹಿತದೃಷ್ಟಿಯಿಂದ ಬ್ಯಾರಿಕೇಡ್ ತಂದು ನಿಲ್ಲಿಸಿದ್ದಾರೆ.