ಕುಮಟಾ: “ಪ್ರತಿಭಾ ಕಾರಂಜಿ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಮಳೆಗಾಲದಲ್ಲಿ ಏರ್ಪಡಿಸುವುದು ಸೂಕ್ತವಲ್ಲ. ಅದರ ಬದಲು ಶಾಲೆಗಳ ಮೊದಲರ್ಧ ಶೈಕ್ಷಣಿಕ ಅವಧಿಯ ಪರೀಕ್ಷೆ ಮುಗಿಸಿದ ತರುವಾಯ ಅದಕ್ಕೆಂದೇ ಕೆಲವು ಪುಸ್ತಕ ರಹಿತ ದಿನಗಳನ್ನು ನಿಗದಿ ಪಡಿಸಿಕೊಂಡು ಎರಡೂ ಸ್ಪರ್ಧೆಗಳನ್ನು ನಡೆಸುವಂತಾದರೆ ನಿಜ ಪ್ರತಿಭೆಗಳು ಅರಳಬಲ್ಲವು ಅಲ್ಲದೇ ಸಂಘಟನೆ, ತರಬೇತಿಗೂ ಸಹಕಾರಿಯಾಗಬಲ್ಲದು” ಎಂದು ಇಲ್ಲಿಯ ಚಿತ್ರಿಗಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕುಮಟಾ ನಗರ ವಲಯದ ಪ್ರತಿಭಾ ಕಾರಂಜಿಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎನ್.ಆರ್.ಗಜು ಅಭಿಪ್ರಾಯಪಟ್ಟರು.

RELATED ARTICLES  ಟಿಪ್ಪು ಜಯಂತಿಗೆ ಶಾಸಕ ಕಾಗೇರಿ ವಿರೋಧ!

ಅಲ್ಲದೇ ಗೌಪ್ಯಾಂಕಗಳನ್ನು ನೀಡುವ ಪದ್ಧತಿ ಹೋಗಿ ಚರ್ಚಿತ ನಿರ್ಣಯ ಪ್ರದಾನವಾದಾಗ ಮಕ್ಕಳು ಸೋತರೂ ಮತ್ತೊಮ್ಮೆ ಪ್ರಯತ್ನಿಸುವ ಅವಕಾಶ ಕಲ್ಪಿಸಿ ಕೊಟ್ಟಂತಾಗುತ್ತದೆ ನಿರ್ಣಯಕ್ಕೂ ಗೌರವ ಸಿಗುತ್ತದೆ ಎಂದು ಅವರು ನುಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಸಮನ್ವಯಾಧಿಕಾರಿ ಗಣೇಶ ನಾಯ್ಕ ಪ್ರತಿಭೆ ಯಾರೊಬ್ಬರ ಸ್ವತ್ತೂ ಅಲ್ಲ ಅದು ಸುಪ್ತವಾಗಿದ್ದು ಹೊರಹೊಮ್ಮುವಂತೆ ಮಾಡುವುದು ಶಿಕ್ಷಣ ಇಲಾಖೆಯ ಜವಾಬ್ದಾರಿ ಎಂದರು. ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಸದಸ್ಯ ಕಿರಣ ನಾಯ್ಕ ಮಾತನಾಡಿ ಸಂಘಟನೆಯ ನೋವನ್ನು ತೋಡಿಕೊಂಡು ನೆರವಾದವರನ್ನು ಸ್ಮರಿಸಿಕೊಂಡರು.

RELATED ARTICLES  ಲಗ್ನಪತ್ರಿಕೆ ನೀಡುವ ನೆಪಮಾಡಿ ಆಭರಣ ಹಾಗೂ ನಗದು ದೋಚಿದ್ದ ಆರೋಪಿ ಪೊಲೀಸ್ ಬಲೆಗೆ.

ಅಧ್ಯಕ್ಷತೆಯನ್ನು ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷ ಲಕ್ಷ್ಮೀಕಾಂತ ಎನ್. ಪಟಗಾರ ಆತಿಥೇಯ ಶಿಕ್ಷಕರ ಶ್ರಮವನ್ನು ಪ್ರಶಂಶಿಸಿದರು. ಎಸ್ಡಿಎಂಸಿ ಉಪಾಧ್ಯಕ್ಷೆ ಮಹಾಲಕ್ಷ್ಮೀ ಪಟಗಾರ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಥ ಪಟಗಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿ.ಆರ್.ಪಿ. ಪ್ರದೀಪ ನಾಯಕ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಗಣಪತಿ ನಾಯ್ಕ ವಂದಿಸಿದರು. ಶಿಕ್ಷಕಿ ಸುಜಾತಾ ನಾಯ್ಕ ನಿರೂಪಿಸಿದರು.