ಧಾರವಾಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸ್ವ ಸಹಾಯ ಸಂಘದ ಸದಸ್ಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆಯಡಿ ಪರಿಸರ ಸ್ನೇಹಿ ತೆಂಗಿನಕಾಯಿ ಗಣಪತಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಪಿ.ಓ.ಪಿ ಗಣಪತಿ ಪ್ರತಿಷ್ಠಾಪನೆಯಿಂದಾಗಿ ಪರಿಸರಕ್ಕೆ ಹಾನಿಯಾಗುತ್ತದೆ. ಹೀಗಾಗಿ ಪರಿಸರ ಸ್ನೇಹಿ ತೆಂಗಿನಕಾಯಿ ಗಣಪತಿಯನ್ನು ಪ್ರತಿಷ್ಠಾಪಿಸುವ ಮೂಲಕ ಕಾಳಜಿ ಮೆರಯಬೇಕು ಎಂದು ಸಲಹೆ ನೀಡಿದರು.
ಗಣೇಶನಿಗಿಂತ ಪ್ರಸಿದ್ದ ದೇವರು ಬೇರೊಂದಿಲ್ಲ. ಮಾರುಕಟ್ಟೆಯಲ್ಲಿಯೂ ನಾನಾ ರೂಪದಲ್ಲಿ ಕಲಾತ್ಮಕವಾಗಿ ಗಣೇಶನ ಮೂರ್ತಿಗಳು ಲಭ್ಯವಾಗಿದೆ. ಈ ದಿನ ಬಿಡುಗಡೆ ಮಾಡಿದ ಪರಿಸರ ಸ್ನೇಹಿ ತೆಂಗಿನಕಾಯಿ ಗಣಪತಿ ಕೂಡ ಕಲಾತ್ಮಕವಾದ ಗೃಹ ಕೈಗಾರಿಕೆಯಿಂದ ಮಾಡಿದ್ದಾಗಿದೆ ಎಂದರು.
ಈ ಮೂರ್ತಿಯನ್ನು ಪೂಜಿಸಿದ ನಂತರ ಹೊಲದ ಬದುಗಳಲ್ಲಿ ನಾಟಿ ಮಾಡುವುದರ ಮೂಲಕ ತೆಂಗಿನ ಗಿಡವಾಗಿ ಕೂಡ ಬೆಳೆದು ಫಲ ಪಡೆಯಬಹುದು. ಉತ್ಸವಕ್ಕೆ ಮಾತ್ರವಲ್ಲದೇ ವರ್ಷ ಪೂರ್ತಿ ಸಂಘದ ಸದಸ್ಯರು ಗೃಹ ಕೈಗಾರಿಕೆ ಮಾಡಿ ವಿವಿಧ ಮಳಿಗೆಯಲ್ಲಿ ಮಾರಾಟ ಮಾಡಬಹುದಾಗಿದೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ನಿರ್ದೇಶಕ ಸೀತಾರಾಮ ಶೆಟ್ಟಿ, ಜಿಲ್ಲಾ ನಿರ್ದೇಶಕ ದಿನೇಶ್ ಎಂ, ಯೋಜನಾಧಿಕಾರಿ ಉಲ್ಲಾಸ್ ಮೇಸ್ತ, ತೆಂಗಿನಕಾಯಿ ಕೆತ್ತನೆಗಾರರ ಸಮಿತಿ ಅಧ್ಯಕ್ಷೆ ಶಾಂತಾ ಗಡಕರ ಉಪಸ್ಥಿತರಿದ್ದರು.