(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)
ಯಾವ ವಿಚಾರಕ್ಕೂ ಅವಕಾಶವಿರದೆ ಅಕಸ್ಮಾತ್ತಾಗಿ ಒದಗಿ, ಅನುಭವಿಸಬೇಕಾಗಿ ಬರುವ ಪರಿಸ್ಥಿತಿಯಲ್ಲಿ ‘ದೈವ’ ಅಥವಾ ‘ವಿಧಿ’ ಎಂದು ಹೇಳದೆ ಮತ್ತೇನು ಹೇಳಲಿಕ್ಕೆ ಬರುವಂತಿದೆ? ಕೈಕೇಯಿಯ ಮೊದಲು ಉದ್ಗರಿಸಿದ ವಾಕ್ಯಗಳನ್ನು ನೋಡಿದರೆ ಅವಳು ಸಾಮಾನ್ಯಳಾದ ಒಬ್ಬ ಅವಿವೇಕಿ ಹೆಂಗಸು ಎಂದು ಹೇಳಲಾಗುವದಿಲ್ಲ. ಇಂತಹವಳು ‘ತ್ವಯಾರಣ್ಯಂ ಪ್ರವೇಷ್ಟವ್ಯಂ’ ಎಂದು ಹೇಳಬೇಕಾದರೆ ಇದು ದೈವೀ ವಿಲಾಸವೇ ಸರಿ. ಇದನ್ನೇ ‘ದುರ್ದಮ್ಯ ದೈವೀ ವಿಲಾಸ’ ಎಂದೆನ್ನಬಹುದು.
ಶ್ರೀರಾಮನು ಈ ಸಂದರ್ಭದಲ್ಲಿ ಲಕ್ಷ್ಮಣನನ್ನು ಸಂತೈಸಲು ಬಹು ಪರಿಯ ಉಪದೇಶ ಮಾಡಿದನು. ಆ ಕೆಲವು ಶ್ಲೋಕಗಳನ್ನು ಪರಿಶೀಲಿಸೋಣ.
ಜಾನಾಸಿ ಹಿ ಯಥಾ ಸೌಮ್ಯನ ಮಾತೃಷು ಮಮಾಂತರಮ್|
ಭೂತಪೂರ್ವಂ ವಿಶೇಷೋ ವಾ ತಸ್ಯಾ ಮಯಿ ಸುತೇಪಿ ವಾ||
ಸೋಽಭಿಷೇಕ ನಿವೃರ್ಥೈಃ ಪ್ರವಾಸಾರ್ಥೈಃ ಸುದುರ್ವಚೈಃ|
ಉಗ್ರೈರ್ವಾಕ್ಯೈರಹಂ ತಸ್ಯಾ ನಾನ್ಯದ್ದೈವಾತ್ಸಮರ್ಥಯೇ||
‘ಲಕ್ಷಣಾ, ನೋಡು, ಇದು ನಿನಗೆ ಗೊತ್ತಿದ್ದ ಮಾತೇ ಸರಿ. ಇಂದಿನವರೆಗಾದರೂ ನನ್ನಲ್ಲಿ ಮತ್ತು ಮಾತೃ ಕೈಕೇಯಿಯಲ್ಲಿ ಯಾವುದೇ ಒಂದು ಮಾತಿಗಾದರೂ ಮತಭೇದವಾದುದುಂಟೇ? ಇಲ್ಲ! ಭರತನಲ್ಲಿ ಮತ್ತು ನನ್ನಲ್ಲಿ ಅವಳಿಗೆ ಒಂದೇ ಪ್ರಕಾರವಾಗಿ ಪ್ರೀತಿಯಿತ್ತಲ್ಲವೇ? ಸ್ವಲ್ಪವೂ ಹೆಚ್ಚು-ಕಡಿಮೆಯೆಂಬುದು ಕಂಡುಬರಲಿಲ್ಲವಷ್ಟೇ? ಹೀಗಿರುವಾಗ ಮಾತೃ ಕೈಕೇಯಿಯು ನನಗೆ ಪಟ್ಟಾಭಿಷೇಕವಾಗಬಾರದು ಮತ್ತು ನಾನು ಅರಣ್ಯಕ್ಕೆ ಹೋಗಬೇಕು ಎಂಬ ವಿಷಯದಲ್ಲಿ ತೊಟ್ಟ ಹಠವನ್ನೂ, ಪಡುವ ಆಗ್ರಹವನ್ನೂ ನೋಡು. ಅವಳ ಆ ಪ್ರಕಾರದ ವಾತ್ಸಲ್ಯವು ಈವಾಗ ಎಲ್ಲಿ ಅಡಗಿತೆಂದು ಹೇಳಲು ಸಾಧ್ಯವಾಗದು. ಕೈಕೇಯಿಯು ಸಾಮಾನ್ಯಳಲ್ಲ.
ಧರ್ಮಾಧರ್ಮ ವಿಚಾರವನ್ನೆಲ್ಲ ತಿಳಿದವಳು. ಅಂತಹುದರಲ್ಲಿ ತನ್ನ ಪತಿಯ ಮುಂದೆ ಏನೂ ಅರಿಯದ, ಹಠವಾದಿಯಾದ ಸಾಮಾನ್ಯವಾದ ಓರ್ವ ಸ್ರೀಯಂತೆ ಈ ವಿಧವಾಗಿ ವರ್ತಿಸುವದನ್ನೂ ಮತ್ತು ಮಾತನಾಡುವದನ್ನೂ ನೋಡಿದರೆ ‘ದೈವೀ ವಿಚಿತ್ರಾಗತಿಃ’ ಎನ್ನುವದರ ಹೊರತಾಗಿ, ಲಕ್ಷಣಾ, ಇನ್ನೇನನ್ನು ಹೇಳಲು ಸಾಧ್ಯ? ತಂದೆ ಮಹಾರಾಜನ ಪ್ರೇಮವೂ ಕೂಡ ಸಾಮಾನ್ಯವೇ? ದೇವಾಸುರರ ಯುದ್ಧದಲ್ಲಿ ಕೈಕೇಯಿಯ ಸಾಹಸಕ್ಕೆ ಮೆಚ್ಚಿ ಕೊಟ್ಟ ವರವು ಈ ವಿಧವಾಗಿ ಅಡ್ಡಗಟ್ಟಬಹುದೆಂದು ಆತನ ಕನಸು-ಮನಸ್ಸಿಲ್ಲಿಯೂಇರಲಿಲ್ಲ. ಅದೆಲ್ಲಾ ಸಮಯ ಸಾಧಿಸಿ ಒದಗಬೇಕಾದರೆ ದೈವವಲ್ಲದೇ ಮತ್ತೇನು ಲಕ್ಷಣಾ? ಇದರ ಪ್ರಭಾವ ಕೂಡ ಅಚಿಂತ್ಯವಾದುದು! ಇದನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ!