ಭಟ್ಕಳ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಆನಂದಾಶ್ರಮ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ನಡೆದ ಕನ್ನಡ ಸಾಡು ನುಡಿ ಸಾಹಿತ್ಯ ಸಂಸ್ಕøತಿಗೆ ಸಂಬಂಧಿಸಿದ ಥಟ್ ಅಂತ ಹೇಳಿ ರಸಪ್ರಶ್ನೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್.ನರಸಿಂಹ ಮೂರ್ತಿ ಮಾತನಾಡಿ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅತ್ಯಂತ ಕ್ರಿಯಾಶೀಲವಾಗಿ ಉಪಯುಕ್ತ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬರುತ್ತಿರುವುದು ಸಂತೋಷದ ವಿಷಯ. ಮಕ್ಕಳನ್ನು ನಾಡು ನುಡಿ ಸಾಹಿತ್ಯದೆಡೆಗೆ ಸೆಳೆಯಲು ವ್ಯವಸ್ಥಿತವಾಗಿ ಆಯೋಜಿಸಿರುವ ಕಾರ್ಯಕ್ರಮವು ಅಭಿನಂದನಾರ್ಹ ಎಂದರಲ್ಲದೇ ಮತ್ತಷ್ಟು ಉತ್ತಮ ಕಾರ್ಯಕ್ರಮಗಳು ಪರಿಷತ್ತಿನಿಂದ ನಡೆಯುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ ಮಾತನಾಡಿ ಸಾಹಿತ್ಯ ಪರಿಷತ್ ವಿದ್ಯಾರ್ಥಿಗಳ ಸಾಹಿತ್ಯಾಭಿರುಚಿ ಹೆಚ್ಚಿಸಲು ಇಂಥ ರಸಪ್ರಶ್ನೆ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವುದು ಉಪಯುಕ್ತ ಎಂದರಲ್ಲದೇ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದುವ ಹವ್ಯಾಸವನ್ನ ಬೆಳೆಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ರಸಪ್ರಶ್ನೆ ಸ್ಪರ್ಧೆಯ ಮೂಲಕ ನಾಡು ನುಡಿಯ ಕುರುತಾದ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ದಾಟಿಸುವುದು ಆ ಮೂಲಕ ನಮ್ಮ ನಾಡು ನುಡಿಯೆಡೆಗಿನ ಆಸಕ್ತಿಯನ್ನು ಬೆಳೆಸುವುದು ಕಾರ್ಯಕ್ರಮದ ಉದ್ದೇಶ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಆನಂದಾಶ್ರಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಸರಿತಾ ಥೋರಸ್, ಆನಂದಾಶ್ರಮ ಕಾನ್ವೆಂಟ್‍ನ ಸುಪೀರಿಯರ್ ಸಿಸ್ಟರ್ ಆರೋಗ್ಯಮ್ಮ ಹಾಗೂ ಕಸಾಪ ಗೌರವ ಕಾರ್ಯದರ್ಶಿ ಎಮ್.ಪಿ.ಬಂಢಾರಿ ಉಪಸ್ಥಿತರಿದ್ದರು.
ರಸಪ್ರಶ್ನೆ ತಾಲೂಕಿನ ವಿವಿಧ ಪ್ರೌಢಶಾಲೆಗಳ ಹನ್ನೊಂದು ತಂಡಗಳು ಭಾಗವಹಿಸಿದ್ದು ಶ್ರೀವಲಿ ಪ್ರೌಢಶಾಲೆ ಚಿತ್ರಾಪುರ ಪ್ರಥಮ, ಜನತಾ ವಿದ್ಯಾಲಯ ಮುರ್ಡೇಶ್ವರ ದ್ವಿತೀಯ, ಜನತಾ ವಿದ್ಯಾಲಯ ಶಿರಾಲಿ ಹಾಗೂ ಆನಂದಾಶ್ರಮ ಪ್ರೌಢಶಾಲೆ ವಿದ್ಯಾರ್ಥಿಗಳು ತೃತೀಯ ಬಹುಮಾನ ಪಡೆದುಕೊಂಡರು. ಭಾಗವಹಿಸಿದ ಎಲ್ಲ ಶಾಲೆಯ ವಿಧ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪುಸ್ತಕಗಳನ್ನು ಬಹುಮಾನವಾಗಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಬ್ದ ಬಂಢಾರ, ನುಡಿಗಟ್ಟುಗಳು, ಗಾದೆಯ ಮಾತುಗಳು, ಕನ್ನಡ ನಾಡಿನ ಸಾಧಕರು, ಪದಬಂಧ, ಸಾಹಿತಿಗಳು ಹಾಗೂ ಕನ್ನಡದ ಕೃತಿಗಳ ಕುರಿತಾದ ಪ್ರಶ್ನೆಗಳನ್ನು ಎಂಟು ಸುತ್ತುಗಳಲ್ಲಿ ಪ್ರೊಜೆಕ್ಟರ್ ಮೂಲಕ ಆನಂದಾಶ್ರಮ ಪ್ರೌಢಶಾಲೆಯ ಶಿಕ್ಷಕ ಹಾಗೂ ಕಸಾಪ ಸಂಘಟನಾ ಸಮಿತಿ ಸದಸ್ಯ ಪೆಟ್ರಿಕ್ ಟೆಲ್ಲಿಸ್ ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಿದರು.
ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಎಮ್.ಪಿ.ಬಂಢಾರಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ಆನಂದಾಶ್ರಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.