ಕಡಪ : ಒಂದಿಲ್ಲೊಂದು ಕಾರಣದಿಂದ ಸುದ್ದಿಯಾಗುತ್ತಿರುವ ಕೇಂದ್ರ ಸಚಿವ ಹಾಗೂ ಉತ್ತರ ಕನ್ನಡದ ಫೈರ್ ಬ್ಯಾಂಡ್ ಎಂದೇ ಪ್ರಸಿದ್ಧರಾಗಿರುವ ಅನಂತ್ ಕುಮಾರ್ ಹೆಗಡೆಯವರ ಕಾರಿನ ಮೇಲೆ ಚಪ್ಪಲಿ ಎಸೆದ ಪ್ರಕರಣ ಒಂದು ವರದಿಯಾಗಿದೆ.
ಆಂಧ್ರಪ್ರದೇಶದ ಕಡಪದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಕಾರಿನ ಮೇಲೆ ಚಪ್ಪಲಿ ಬಿಸಾಡಿದ ಘಟನೆ ನಡೆದಿದೆ.
ಕೆಲವು ಅನಂತ್ ಕುಮಾರ್ ವಿರೋಧಿಗಳು ಅನಂತಕುಮಾರ್ ಹೆಗಡೆ ಕುಳಿತಿದ್ದ ಕಾರನ್ನು ಅಡ್ಡ ಹಾಕಿ ರಸ್ತೆಯಲ್ಲೇ ಮಲಗಿ ಮುಂದೆ ಸಾಗಲು ತಡೆಯೊಡ್ಡಿದ್ದಾರೆ ಎನ್ನಲಾಗಿದೆ. ಈ ವೇಳೆ ಓರ್ವ ಮಹಿಳೆ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಕೇಂದ್ರ ಸಚಿವರ ಮುಂಭಾಗದ ಗಾಜಿಗೆ ಚಪ್ಪಲಿ ಬಿಸಾಡಿದ್ದಾರಂತೆ.
ಕೇಂದ್ರ ಸರ್ಕಾರದಿಂದ ಆಂಧ್ರಪ್ರದೇಶಕ್ಕೆ ವಿಶೇಷ ಮಾನ್ಯತೆ ನೀಡುವಂತೆ ಮತ್ತು ಕಡಪದಲ್ಲಿ ಸ್ಟೀಲ್ ಫ್ಯಾಕ್ಟರಿಗೆ ಆಗ್ರಹಿಸಿ ಕೇಂದ್ರ ಸಚಿವರ ಕಾರನ್ನು ಅಡ್ಡಗಟ್ಟಿದ ಜನರು ಗಲಾಟೆಯೆಬ್ಬಿಸಿದ್ದಾರೆ ಎನ್ನಲಾಗಿದೆ.
ಇಷ್ಟಾದರೂ ಕಾರಿನಿಂದ ಕೆಳಗೆ ಇಳಿಯದೆ ಒಳಗೇ ಕುಳಿತುಕೊಂಡ ಸಚಿವರ ವಿರುದ್ಧ ಆಕ್ರೋಶಗೊಂಡ ಮಹಿಳಾ ಪ್ರತಿಭಟನಾಕಾರ್ತಿಯೊಬ್ಬರು ಚಪ್ಪಲಿ ಬಿಸಾಡಿದ್ದಾರೆ ಎನ್ನಲಾಗಿದೆ.
ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಅರಿತ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸುವ ಮೂಲಕ ಅನಂತ್ಕುಮಾರ್ ಹೆಗಡೆ ಅವರ ಕಾರಿಗೆ ದಾರಿ ಮಾಡಿಕೊಟ್ಟಿದ್ದಾರೆ.
ಲೋಕ ಸಭಾ ಚುನಾವಣೆ ಸಮೀಪಿಸುತ್ತಿದ್ದು ಇದೀಗ ಈ ರೀತಿಯ ಘಟನಾವಳಿಗಳು ನಡೆದಿರುವುದು ವಿಶೇಷ ಹಾಗೂ ಎಲ್ಲರ ಮನದಲ್ಲಿ ಗೊಂದಲ ಮೂಡುವಂತಾಗಿದೆ ಎನ್ನಲಾಗಿದೆ.