ಕುಮಟಾ:ಉತ್ತರ ಕನ್ನಡ ಜಿಲ್ಲೆ ಕುಮಟಾ ಸಮೀಪದ ಧಾರೇಶ್ವರನ ಸನ್ನಿಧಿಯಿಂದ ಕೇವಲ ಎರಡು ಕಿಮೀ ದೂರದಲ್ಲಿರುವ ಗೋರೆ ಗುಡ್ಡ ಕೇವಲ ಕಲ್ಲು ಗುಡ್ಡೆಯಲ್ಲ, ಶಿವ ಸಂಕಲ್ಪದ ತಪೋಭೂಮಿ ಎಂಬುದು ಜನಜನಿತ. ಇಂತಹ ಪುಣ್ಯ ಕ್ಷೇತ್ರದಲ್ಲಿ ಕೃಷ್ಣಾಷ್ಟಮಿಯ ಸಡಗರ ಮನೆ ಮಾಡಿತ್ತು. ದೇವರಿಗೆ ವಿಶೇಷ ಪೂಜೆ ಪುನಸ್ಕಾರದ ಮೂಲಕ ಜನತೆ ಭಕ್ತಿ ಮೆರೆದರು. ಕೃಷ್ಣನಿಗೆ ಪ್ರಿಯವಾದ ಅವಲಕ್ಕಿ , ಬೆಣ್ಣೆ ಅರ್ಪಿಸಿ ಪುನೀತರಾದರು.
ಇಲ್ಲಿದೆ ಗೋರೆಯ ಇತಿಹಾಸ.
ಇತಿಹಾಸದಲ್ಲಿ ಮಾಂಧಾತ ರಾಜರೊಬ್ಬರ ಕಾಲಕ್ಕೆ ಶ್ರೀಗೋಪಾಲಕೃಷ್ಣ ದೇವರ ಸಾನ್ನಿಧ್ಯ ಸ್ಥಾಪನೆಯಾಗಿ ಬಳಕೆಯಲ್ಲಿತ್ತು. ಇದಕ್ಕೂ ಮುನ್ನವೇ ಸ್ವತಃ ಶಿವನ ಅಪ್ಪಣೆಯಂತೆ ನಂದಿಕೇಶ್ವರನೇ ತನ್ನ ಶೃಂಗದಿಂದ ನಿರ್ಮಿಸಿದ ಎನ್ನಲಾಗುವ ತೀರ್ಥೋದಕ ಇಂದಿಗೂ ನಂದಿಶೃಂಗತೀರ್ಥವೆಂದು ಐತಿಹ್ಯ ಹೊಂದಿದೆ.
ಕಾಲಾಂತರದಲ್ಲಿ ದುಷ್ಟಶಕ್ತಿಗಳಿಂದ ಜೀರ್ಣಗೊಂಡ ಗುಡಿ, ಕಲುಷಿತಗೊಂಡ ತೀರ್ಥವನ್ನು ಸ್ವತಃ ದತ್ತಾತ್ರೇಯ ಅವತಾರವೆಂದೇ ಖ್ಯಾತರಾದ ಶ್ರೀಧರ ಸ್ವಾಮಿಗಳೇ ಪುನರುದ್ಧಾರಗೊಳಿಸಿದ್ದರು.
ಗುಡಿಗೋಪುರಗಳು ನಿರ್ಮಾಣಗೊಂಡು ರಥೋತ್ಸವಗಳು ಆರಂಭವಾದವು. ದಿನದಿಂದ ದಿನಕ್ಕೆ ಚೇತೋಹಾರಿಯಾಗಿ ಬೆಳೆದ ಗೋರೆ ಕ್ಷೇತ್ರದಲ್ಲಿ ಶ್ರೀಧರರು ತಮ್ಮ ಶಿಷ್ಯರಾದ ಈಶ್ವರ ಸಾಧುಗಳನ್ನು ಕಳುಹಿದರು. ಶ್ರೀಧರರು ಮಹಾಸಮಾಧಿಸ್ತರಾದ ನಂತರ ಈಶ್ವರ ಸಾಧುಗಳು ಗೋರೆಯಲ್ಲಿಯೇ ತುರ್ಯಾಶ್ರಮ ಸ್ವೀಕರಿಸಿ ಗೋಪಾಲ ಸದಾನಂದ ಸ್ವಾಮಿಗಳೆಂಬ ಯೋಗ ಪಟ್ಟ ಪಡೆದರು.
ಗೋಪಾಲಕೃಷ್ಣ ಗುಡಿಯ ಸನಿಹದಲ್ಲೇ ಶ್ರೀಧರ ಪಾದುಕಾ ಮಂದಿರ ನಿರ್ಮಾಣವಾಯಿತು. ಉತ್ತರ ದಿಕ್ಕಿನಲ್ಲಿ ದಕ್ಷತುಂಡ ಗಣಪತಿ ಮೂರ್ತಿಯ ಉದ್ಭವವಾಯಿತು. ಗಣಪತಿಗೆ ಗುಡಿಯ ನಿರ್ಮಾಣವಾಯಿತು. 1984 ರಲ್ಲಿ ಶ್ರೀ ಸದಾನಂದ ಸ್ವಾಮಿಗಳು ಐಕ್ಯರಾದ ನಂತರ ಪಾದುಕಾ ಮಂದಿರದಲ್ಲಿಯೇ ಸಮಾಧಿ ಮಾಡಲಾಯಿತು.
ಗುರು ಪ್ರೇರಣೆಯಂತೆ ಪರಿವ್ರಾಜಕರಾಗಿದ್ದ ಶ್ರೀ ನಿತ್ಯಾನಂದ ಸ್ವಾಮಿಗಳನ್ನು ಭಕ್ತಾದಿಗಳು ಗೋರೆಕ್ಷೇತ್ರಕ್ಕೆ ಸ್ವಾಗತಿಸಿ ನೆಲೆಯಾಗಿಸಿದರು. ಕೃಷ್ಣ ಸೇವೆ, ಪಾದುಕಾಸೇವೆ, ಭಕ್ತರ ಇಷ್ಟಾರ್ಥ ಸಿದ್ಧಿಯೂ ಮುಂದುವರೆಯಿತು. ಗೋಶಾಲೆ, ಯಾಗಶಾಲೆ ಸೇರಿದಂತೆ ಹಲವು ಕಟ್ಟಡಗಳು ನಿರ್ಮಾಣಗೊಂಡವು. 2005ರಲ್ಲಿ ಸಹಸ್ರ ಚಂಡಿಕಾ ಮಹಾಯಾಗವೂ ನಡೆಯಿತು. ನಂತರ ಬ್ರಹ್ಮೈಕ್ಯರಾದ ನಿತ್ಯಾನಂದ ಸ್ವಾಮಿಗಳನ್ನೂ ಪಾದುಕಾ ಮಂದಿರದಲ್ಲೇ ಸಮಾಧಿಸ್ತಗೊಳಿಸಲಾಯಿತು.
ಹೀಗೆ, ಸಹಸ್ರಾರು ವರ್ಷಗಳ ಭವ್ಯ ಐತಿಹ್ಯದೊಂದಿಗೆ, ಸಿದ್ಧಿಸಾಧನೆಯ ತಾಣವಾಗಿ ಗುರುತಿಸಿಕೊಂಡ ಗೋರೆಯಲ್ಲಿ ಇಂದು ಕೃಷ್ಣಾಷ್ಟಮಿಯ ಸಂಭ್ರಮ.