ಹೈದರಾಬಾದ್: ಹೈದರಾಬಾದ್ ನಲ್ಲಿರುವ ಪ್ರಖ್ಯಾತ ನಿಜಾಮ್ ಮ್ಯೂಸಿಯಂನಿಂದ ಅಂದಾಜು 2 ಕೆಜಿಯಷ್ಟು ತೂಕದ ಐತಿಹಾಸಿಕ ಚಿನ್ನಭಾರಣಗಳು ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಈ ಮ್ಯೂಸಿಯಂನಲ್ಲಿ ಅತಿ ಭದ್ರತೆ ಇರುವ ಮ್ಯೂಸಿಯಂ ಎಂದೇ ಕರೆಯಲಾಗುತ್ತಿದ್ದ ನಿಜಾಮ್ ಮ್ಯೂಸಿಯಂನಲ್ಲೇ ಈಗ ದರೋಡೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಮ್ಯೂಸಿಯಂನಿಂದ 2 ಕೆ.ಜಿ ತೂಕದ ಚಿನ್ನದ ಟಿಫಿನ್ ಬಾಕ್ಸ್, ಒಂದು ಕಪ್, ತಟ್ಟೆ, ಮತ್ತು ಚಮಚ, ವಜ್ರಗಳು ಕಳವಾಗಿದೆ.
ಹೈದರಾಬಾದ್ ನ ಹಳೆಯ ನಗರದಲ್ಲಿರುವ ಪುರಾನಿ ಹವೇಲಿಯಲ್ಲಿರುವ ಮ್ಯೂಸಿಯಂ ಒಳಗೆ ಭಾನುವಾರ ರಾತ್ರಿ ನುಗ್ಗಿದ ಖದೀಮರು ಚಿನ್ನಭರಣ ದೋಚಿ ದರೋಡೆ ಮಾಡಿದ್ದಾರೆ. ಮೌಲ್ಯಯುತವಾದ ವಸ್ತುಗಳು ಕಾಣೆಯಾದುದನ್ನು ಕಂಡ ಮ್ಯೂಸಿಯಂ ಅಧಿಕಾರಿಗಳು ಮಿರ್ ಚೌಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೊದಲ ಮಹಡಿಯಲ್ಲಿದ್ದ ಕಬ್ಬಿಣದ ಗ್ರಿಲ್ ಮತ್ತು ವೆಂಟಿಲೇಟರ್ ನ್ನು ದರೋಡೆಕೋರರು ಮುರಿದು ಒಳನುಗ್ಗಿದ್ದಾರೆ. ಅಲ್ಲದೆ ಕಟ್ಟಡಕ್ಕೆ ಪ್ರವೇಶಿಸಲು ಹಗ್ಗವನ್ನು ಬಳಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ಇದರ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅಂತೆಯೇ ಮ್ಯೂಸಿಯಂ ಒಳಗಿನವರ ಕಳ್ಳತನದ ಪಾತ್ರದ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ .